ಕಾಂಪೌಂಡ್ ಹಾರಿ ನಾಪತ್ತೆ, ಹಾವೇರಿಯಲ್ಲಿ ಆತಂಕ.
ಹಾವೇರಿ: ರಾಜ್ಯದಲ್ಲಿ ಮಾರ್ಚ್ 18ರಿಂದ SSLC ಪರೀಕ್ಷೆಗಳು ಆರಂಭವಾಗಲಿದ್ದು, ಪೂರ್ವ ಸಿದ್ಧತಾ ಪರೀಕ್ಷೆ ಸೇರಿ ಅಂತಿಮ ಹಂತದ ತಯಾರಿ ನಡೆಯುತ್ತಿವೆ. ಉತ್ತಮ ಅಂಕಗಳೊಂದಿಗೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಬೇಕೆಂಬ ಉದ್ದೇಶದಿಂದ ಶಿಕ್ಷಕರು ಮಾತ್ರವಲ್ಲದೆ ಶಿಕ್ಷಣ ಅಧಿಕಾರಿಗಳು, ತಹಶೀಲ್ದಾರ್ಗಳೂ ಕೆಲವೆಡೆ ತಮ್ಮದೇ ಆದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಪರೀಕ್ಷೆ ಬಗ್ಗೆ ಮಕ್ಕಳು ಆತಂಕಕ್ಕೆ ಒಳಗಾಗಬಾರದು ಎಂದು ಹಲವು ಕಾರ್ಯಕ್ರಮಗಳನ್ನು ನಡೆಸಿ ಅವರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿವೆ. ಹೀಗಿದ್ದರೂ ಹತ್ತನೇ ತರಗತಿ ಪರೀಕ್ಷೆಗೆ ಹೆದರಿ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ 5 ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ರಾಣೆಬೆನ್ನೂರು ತಾಲೂಕು ಸುಣಕಲಬಿದರಿ ವಸತಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಅಂಜಿ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು, ವಿದ್ಯಾರ್ಥಿಗಳ ಕುರಿತ ಮಾಹಿತಿಯನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಚ್ಚಿಟ್ಟಿರುವ ಆರೋಪ ಕೇಳಿಬಂದಿದೆ. ಮಕ್ಕಳು ಇದ್ದಾರೆ, ಸಿಕ್ಕಿದ್ದಾರೆ ಎಂದು ವಸತಿ ಶಾಲೆಯವರು ಹೇಳುತ್ತಿದ್ದು, ಅವರು ಬೇರೆಡೆ ಇದ್ದಾರೆಂದು ಹಾರಿಕೆ ಉತ್ತರ ನೀಡುತ್ತಿರುವ ಬಗ್ಗೆಯೂ ದೂರಲಾಗಿದೆ. ರಾತ್ರಿ ವೇಳೆ ವಾಚ್ಮೆನ್ ಇಲ್ಲದಿರೋದನ್ನು ಗಮನಿಸಿದ್ದ ವಿದ್ಯಾರ್ಥಿಗಳು, ಇಂದು ನಸುಕಿನ ಜಾವ ವಸತಿ ಶಾಲೆ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದ ಹಿನ್ನೆಲೆ ಇವುಗಳಿಗೆ ಹೆದರಿ ಅವರು ವಸತಿಶಾಲೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.
For More Updates Join our WhatsApp Group :




