ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ.
ಬೆಂಗಳೂರು : ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಎಲ್ಲೆಲ್ಲಿ, ಯಾರ ವಾಸ್ತವ್ಯಗಳ ಮೇಲೆ ಲೋಕಾ ದಾಳಿ?
ಬೆಳಗ್ಗೆ ಸುಮಾರು 6 ಗಂಟೆಯಿಂದಲೇ ಲೋಕಾಯುಕ್ತ ಪೊಲೀಸರು ಹಲವು ತಂಡಗಳಾಗಿ ವಿಭಜನೆಗೊಂಡು ದಾಳಿ ಆರಂಭಿಸಿದ್ದಾರೆ. ಬೆಂಗಳೂರು ನಗರದಲ್ಲಿ ವೆಟರ್ನರಿ ಕಾಲೇಜು ಹೆಬ್ಬಾಳದ ಅಸಿಸ್ಟೆಂಟ್ ಪ್ರೊಫೆಸರ್ ಇಂದರೇಶ್ ಹಾಗೂ ಸಿಂಗನಾಯಕನಹಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಶಶಿಧರ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ವಿರೇಶ್ ಹಿರೇಮಠ್ ಅವರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಮಂಡ್ಯದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡ ಅವರ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಹೈಡ್ರಾಮಾ!
ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಅಧಿಕಾರಿಗಳು ಬಾಗಿಲು ತೆರೆಯದೆ ಹೈಡ್ರಾಮ ನಡೆದ ಘಟನೆ ಕೂಡ ಕಂಡುಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಅಧಿಕಾರಿಗಳ ತಂಡ ಮನೆ ಮುಂದೆ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
For More Updates Join our WhatsApp Group :




