ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ಬಜೆಟ್ ಪ್ರಸ್ತಾವನೆ – ಬಜೆಟ್ ಗಾತ್ರ ನಾಲ್ಕೂವರೆ ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ
ಬೆಂಗಳೂರು : ಇಂದು ಎಲ್ಲರ ಚಿತ್ತ ಕರ್ನಾಟಕ ಬಜೆಟ್ ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಇಂದು 2026-27ನೇ ಸಾಲಿನ ದಾಖಲೆಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಅವರ 17ನೇ ಬಜೆಟ್. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ನಾಲ್ಕೂವರೆ ಲಕ್ಷ ಕೋಟಿ ರೂ.ತಲುಪುವ ನಿರೀಕ್ಷೆ ಇದೆ. 2025ರಲ್ಲಿ ಆದಾಯ ಸಂಗ್ರಹದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದ ಕಾರಣ 2026-27ನೇ ಸಾಲಿನ ಬಜೆಟ್ ಮೇಲೆ ಅದರ ಪರಿಣಾಮ ಗೋಚರಿಸುವ ಸಾಧ್ಯತೆಗಳಿವೆ.
1995-96ರಲ್ಲಿ ಮೊದಲ ಮುಂಗಡಪತ್ರ ಮಂಡಿಸಿದ್ದ ಸಿದ್ದರಾಮಯ್ಯ ಕಳೆದ 30 ವರ್ಷಗಳಲ್ಲಿ ಇದೀಗ 17 ಬಜೆಟ್ ಮಂಡಿಸಲಿದ್ದಾರೆ. 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನೂ ಹೊಂದಿದ್ದರು. ಆ ಅವಧಿಯ ಎಲ್ಲಾ ಬಜೆಟ್ಗಳನ್ನ ಅವರೇ ಮಂಡಿಸಿದ್ದರು. ಎರಡನೇ ಅವಧಿ ಮುಖ್ಯಮಂತ್ರಿಯಾದ ಬಳಿಕ ಈವರೆಗೂ ಮೂರು ಬಾರಿ ಬಜೆಟ್ ಮಂಡಿಸಿದ್ದು, 4ನೇ ಬಜೆಟ್ ಮಂಡನೆಗೆ ಈಗ ಸಿದ್ಧವಾಗಿದ್ದಾರೆ.
2026ರ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡಬಹುದು, ಪಂಜಾಬ್ ಮಾದರಿಯಲ್ಲಿ ರೈತರ ಓಡಾಟಕ್ಕೆ ಟೋಲ್ ಫ್ರೀ ವ್ಯವಸ್ಥೆ, ನಗರಗಳ ಅಭಿವೃದ್ಧಿಗೆ ಮೆಗಾಸಿಟಿ ಯೋಜನೆ ಘೋಷಣೆ ಸಾಧ್ಯತೆ, ಟನಲ್ ರೋಡ್ ಹಾಗೂ ಡಬಲ್ ಡೆಕ್ಕರ್ ರೋಡ್ ಯೋಜನೆ ವಿಸ್ತರಣೆ, ರೈತರ ಎಲ್ಲಾ ಬೆಳೆಗಳಿಗೆ ವಿಶೇಷ ವಿಮಾ ಯೋಜನೆ ಘೋಷಣೆ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2024-2025ರಲ್ಲಿ ಒಟ್ಟು 3.71 ಲಕ್ಷ ಕೋಟಿ ರೂ. ಗಾತ್ರದ ಹಾಗೂ 2025-2026ರಲ್ಲಿ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಯಾವೆಲ್ಲಾ ಘೋಷಣೆಗಳನ್ನು ಮಾಡಲಿದ್ದಾರೆ, ಯಾವುದೆಲ್ಲಾ ದುಬಾರಿಯಾಗಲಿವೆ, ಯಾವ್ಯಾವ ಜಿಲ್ಲೆಗಳಿಗೆ ಎಷ್ಟು ಹಣ ಸಿಗಲಿದೆ ಎಂಬುದರ ಕುರಿತ ಬಜೆಟ್ನ ಕ್ಷಣ ಕ್ಷಣದ ಮಾಹಿತಿ.
For More Updates Join our WhatsApp Group :




