ಯಾದಗಿರಿ ಜಿಲ್ಲೆಯಿಂದ UPSC ಸಾಧನೆ.

ಯಾದಗಿರಿ ಜಿಲ್ಲೆಯಿಂದ UPSC ಸಾಧನೆ.

ವೈದ್ಯ ವೃತ್ತಿ ಬಿಟ್ಟು ಯಶಸ್ಸು ಸಾಧಿಸಿದ ಯುವತಿ.

ಯಾದಗಿರಿ : ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶೈಕ್ಷಣಿಕವಾಗಿ ಹಿಂದುಳಿದ ಎಂದು ಕರೆಯಲಾಗುವ ಯಾದಗಿರಿ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ಒಂದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಜಿಲ್ಲೆಯ ಜನರಲ್ಲಿ ಹೆಮ್ಮೆ ಮೂಡಿಸಿದ್ದಾರೆ.

ಒಂದೇ ಜಿಲ್ಲೆಯ ನಾಲ್ವರ ಸಾಧನೆ!

ಯಾದಗಿರಿ ನಗರದ ಸಂದೀಪ್ ಬಾಡದ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 82ನೇ ರ್ಯಾಂಕ್ ಪಡೆದು ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಯಾದಗಿರಿ ನಗರದ ಡಾ. ನಿವೇದಿತಾ ಬಾವಿಮನಿ 469ನೇ ರ್ಯಾಂಕ್, ಶಹಾಪುರ ನಿವಾಸಿ ಬಸವರಾಜ್ ಜವಳಿ 664ನೇ ರ್ಯಾಂಕ್ ಹಾಗೂ ಚೆನ್ನೂರು ಗ್ರಾಮದ ಚಂದ್ರಶೇಖರ್ 880ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಡಾ. ನಿವೇದಿತಾ

ಇದರ ನಡುವೆ ಡಾ. ನಿವೇದಿತಾ ಬಾವಿಮನಿ ಅವರ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಮಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಭ್ರಮಾಚರಣೆ ನಡೆಸಿದ್ದಾರೆ. ಪೋಷಕರು ಮಗಳಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರೆ, ಪೊಲೀಸರು ಸಹ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದರು. ನಿವೇದಿತಾ ಅವರ ತಂದೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ತಾಯಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೈದ್ಯೆಯಾಗಿದ್ದ ನಿವೇದಿತಾ ಮೂರು ವರ್ಷಗಳ ಹಿಂದೆ ವೈದ್ಯ ವೃತ್ತಿಯನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು. ಆರಂಭದಿಂದಲೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಕನಸು ಹೊಂದಿದ್ದ ಅವರು ಸತತ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಹಿಂದುಳಿದ ಜಿಲ್ಲೆ ಎಂಬ ಹೆಸರು ಇದ್ದರೂ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯಾಗಬೇಕು ಎಂಬ ಆಸೆಯಿದ್ದು, ಅವಕಾಶ ಸಿಕ್ಕರೆ ಜನಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ನಿವೇದಿತಾ ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *