ಕುರ್ಚಿ ಕಾದಾಟದ ಮಧ್ಯೆಯೂ ಡಿಕೆಶಿ ಗುಣಗಾನ ಮಾಡಿದ ಸಿದ್ದರಾಮಯ್ಯ

ಕುರ್ಚಿ ಕಾದಾಟದ ಮಧ್ಯೆಯೂ ಡಿಕೆಶಿ ಗುಣಗಾನ ಮಾಡಿದ ಸಿದ್ದರಾಮಯ್ಯ

 ‘ಹಾಲು-ಜೇನಿನ ಸಂಬಂಧ’ ಹೇಳಿಕೆಗೆ ಮತ್ತೊಂದು ಉದಾಹರಣೆ

ಬೆಂಗಳೂರು : ಕರ್ನಾಟಕದ ಸಿಎಂ ಕುರ್ಚಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ನಡುವಿನ ತಿಕ್ಕಾಟ ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದರೂ ಉಭಯ ನಾಯಕರು ಇಲ್ಲಿಯವರೆಗೂ ಎಲ್ಲಿಯೂ ಒಬ್ಬರ ವಿರುದ್ಧ ಮತ್ತೊಬ್ಬರು ಬಹಿರಂಗ ಸಮರ ಸಾರಿಲ್ಲ. ಮೊನ್ನೆ ಮೊನ್ನೆಯಷ್ಟೇ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ ಎಂದು ಸಿದ್ದರಾಮಯ್ಯ ಹೇಳಿದ್ದಿದ್ದು ಹಲವರ ಹುಬ್ಬೇರಿಸಿತ್ತು. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್​ 6 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಎಕ್ಸ್​ ಖಾತೆಯ ಮೂಲಕ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ.  ಅಷ್ಟೇ ಅಲ್ಲದೆ ಅಕ್ಷರಶಃ ಕೆಪಿಸಿಸಿ ಅಧ್ಯಕ್ಷರ ಗುಣಗಾನ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್​ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ಧತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವ ನಾಯಕರಿಗೆ ಮಾದರಿ. ವಿಪಕ್ಷ ಬಿಜೆಪಿ ಸುಳ್ಳು ಕೇಸ್​ಗಳನ್ನು ಹಾಕಿ ಬಗೆಬಗೆಯ ಕಿರುಕುಳ ನೀಡಿದರೂ ಡಿ.ಕೆ.ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ. ಇದು ಕಾಂಗ್ರೆಸ್​​ನ ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ನಡವಳಿಕೆಯೂ ಹೌದು. ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್​ ಅಧಿಕಾರಕ್ಕೆ ತರುವುದಕ್ಕೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಡಿಕೆಶಿಯವರು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ ಎಂದು ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ.

ನನಗಿಂತ ಕಿರಿಯರಾದ ಡಿ.ಕೆ. ಶಿವಕುಮಾರ್​​ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮ ಬಯಕೆ. ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡ ಜೊತೆಯಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಸಿಎಂ ಕುರ್ಚಿ ವಿಚಾರದಲ್ಲಿ ಇಬ್ಬರ ನಡುವೆ ಅದೆಷ್ಟೇ ತಿಕ್ಕಾಟಗಳು ನಡೆದು, ವಿಷಯ ಹೈಕಮಾಂಡ್​​ ಅಂಗಳ ತಲುಪಿದ್ದರೂ ಉಭಯ ನಾಯಕರ ನಡೆ ಮಾತ್ರ ಭಾರೀ ಕುತೂಹಲ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *