ಶೇಷಾದ್ರಿಪುರಂನಲ್ಲಿ ತಪ್ಪಿದ ಭಾರೀ ಅನಾಹುತ.
ಬೆಂಗಳೂರು : ರಾಜಧಾನಿಯ ಹೃದಯಭಾಗದ ಶೇಷಾದ್ರಿಪುರಂನಿಂದ ಆನಂದರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಇಂದು ಬೆಳಿಗ್ಗೆ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದೆ. ರೈಲ್ವೆ ಬ್ರಿಡ್ಜ್ ಕೆಳಭಾಗಕ್ಕೆ ಅಳವಡಿಸಲಾಗಿದ್ದ ಬೃಹತ್ ತಗಡಿನ ಶೀಟ್ ಸಂಚರಿಸುತ್ತಿದ್ದ ಬಸ್‌ಗೆ ತಗುಲಿ ನಡುರಸ್ತೆಯಲ್ಲೇ ಕಳಚಿಬಿದ್ದಿದೆ. ಅಂಡರ್ ಪಾಸ್‌ನ ಮೇಲ್ಭಾಗದ ಶೀಟ್‌ಗಳನ್ನು ಹಿಡಿದಿಟ್ಟಿದ್ದ ಕಬ್ಬಿಣದ ಕ್ಲಿಪ್‌ಗಳು ತುಕ್ಕು ಹಿಡಿದು ಕಟ್ ಆಗಿದ್ದವು.
ಈ ವೇಳೆ ಬಸ್ಸು ಹಾದುಹೋಗುವಾಗ ಶೀಟ್‌ಗೆ ತಗುಲಿದ ಪರಿಣಾಮ, ಭಾರೀ ಗಾತ್ರದ ತಗಡು ರಸ್ತೆಗೆ ಬಿದ್ದಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಶೀಟ್ ಬೀಳುವಾಗ ಯಾವುದೇ ದ್ವಿಚಕ್ರ ವಾಹನ ಅಥವಾ ಪಾದಚಾರಿಗಳು ಅಡಿ ಬಾರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.ಸದ್ಯ ಬಿದ್ದಿರುವ ಶೀಟ್ ಮಾತ್ರವಲ್ಲದೆ, ಪಕ್ಕದಲ್ಲಿರುವ ಇತರ ಹಲವು ತಗಡಿನ ಶೀಟ್‌ಗಳ ಕ್ಲಿಪ್‌ಗಳು ಕೂಡ ತುಕ್ಕು ಹಿಡಿದು ತುಂಡಾಗಿವೆ. ಅವುಗಳು ಕೂಡ ಯಾವುದೇ ಕ್ಷಣದಲ್ಲಿ ಕೆಳಗೆ ಬೀಳುವ ಸಾಧ್ಯತೆ ಇದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಶೇಷಾದ್ರಿಪುರಂ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಸ್ತೆಯಲ್ಲಿದ್ದ ಶೀಟ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಉಳಿದ ಅಪಾಯಕಾರಿ ಶೀಟ್‌ಗಳ ಬಗ್ಗೆ ರೈಲ್ವೆ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.
For More Updates Join our WhatsApp Group :




