ಮುಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಗಂಭೀರ ಆರೋಪ.
ಮಂಗಳೂರು : ಕಾನೂನು ರಕ್ಷಕನೇ ಭಕ್ಷಕನಾದರೆ ಸಾಮಾನ್ಯ ಜನರ ಗತಿ ಏನು? ದೂರು ನೀಡಲು ಬಂದವರನ್ನೇ ಲೈಂಗಿಕವಾಗಿ ಬಳಸಿಕೊಳ್ಳುವ ಕಾಮುಕ ಪೊಲೀಸ್ ಅಧಿಕಾರಿಯೊಬ್ಬನ ಕರ್ಮಕಾಂಡ ಈಗ ಬಯಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಇಡೀ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.
ಏನಿದು ಮೂಡಬಿದ್ರೆ ಇನ್ಸ್ಪೆಕ್ಟರ್ ಕಾಮಕಾಂಡ ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈತ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ‘ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು’ ಎಂದು ಇನ್ಸ್ಪೆಕ್ಟರ್ ಧಮಕಿ ಹಾಕಿರುವ ವಿಷಯ ಈಗ ಬೆಳಕಿಗೆ ಬಂದಿದೆ. ‘ನಾನು ಪೋಸ್ಟಿಂಗ್ಗಾಗಿ ಗೃಹಸಚಿವರಿಗೆ 50 ಲಕ್ಷ ನೀಡಿ ಬಂದಿದ್ದೇನೆ’ ಎಂದು ಈತ ಅಹಂಕಾರದಿಂದ ಹೇಳಿಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಕೊನೆಗೂ ಎಚ್ಚೆತ್ತ ಪೊಲೀಸ್ ಇಲಾಖೆ
ಈವರೆಗೂ ಯಾವೊಬ್ಬ ಮಹಿಳೆಯೂ ಅಧಿಕೃತವಾಗಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಮನವಿ ಮಾಡಿದ್ದಾರೆ. ಆದರೆ ಮತ್ತೊಂದೆಡೆ, ಈಗಾಗಲೇ ಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
For More Updates Join our WhatsApp Group :



