ಪ್ರತಿ 3 ತಿಂಗಳಿಗೆ ದರ ಏರಿಕೆ ಆರೋಪ.
ಬೆಂಗಳೂರು: ಬೆಲೆ ಏರಿಕೆ ಎಂಬ ಪದ ಕೇಳಿದರೆ ಸಾಕು ಜನ ಸಾಮಾನ್ಯರು ಹೆದರಬೇಕಾದ ಸ್ಥಿತಿ ಸದ್ಯ ಕರ್ನಾಟಕದಲ್ಲಿದೆ. ನಾನಾ ಕಾರಣಗಳಿಂದಾಗಿ ಪ್ರತಿ ವಸ್ತುವಿನ ದರವೂ ಗಗನಕ್ಕೇರಿದೆ. ಈ ನಡುವೆ ಜನರಿಗೆ ಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳೇ ಜನರಿಂದ ಸುಲಿಗೆ ಮಾಡುತ್ತಿರುವ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದ್ದು, ನಾಗರಿಕರ ಗಮನಕ್ಕೇ ಬಾರದಂತೆ ಜೇಬಿಗೆ ಕತ್ತರಿ ಹಾಕುತ್ತಿರುವ ವಿಚಾರ ಶಾಕ್ ನೀಡಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಜಲ ಮಂಡಳಿ ಸತತವಾಗಿ ನೀರಿನ ದರ ಏರಿಕೆ ಮಾಡುತ್ತಾ ಬಂದಿದ್ದರೂ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ ಎಂಬುದು ವಿಪರ್ಯಾಸ.
BWSSB ಕಳೆದ ಎರಡು ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ದರ ಏರಿಕೆ ಮಾಡುತ್ತಿದ್ದು, ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆ ಬರೆ ಹಾಕಿ ಜನರಿಂದ ವಸೂಲಿ ಮಾಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಬೆಲೆ ಹೆಚ್ಚಳದಂತೆ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಹೊರೆ ಜನರ ಮೇಲೆ ಹಾಕಲಾಗ್ತಿದೆ. ಹೀಗಿದ್ದರೂ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದೆ, ಸಾರ್ವಜನಿಕರ ಗಮನಕ್ಕೂ ತರದೆ ನಾಗರಿಕೆ ಸುಲಿಗೆ ಮಾಡುವ ಕೆಲಸ BWSSB ಕಡೆಯಿಂದ ಆಗ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿರುವ ನಡುವೆ ಅವರ ಜೊತೆ ನಿಲ್ಲಬೇಕಿದ್ದ ಸರ್ಕಾರ ಎಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳು, ಅರಿವಿಲ್ಲದಂತೆ ಅವರ ಜೇಬಿಗೇ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗಿವೆ. ತಮ್ಮ ಗಮನಕ್ಕೆ ಬಾರದೇ ಜನರು ಅದಾಗಲೇ ಬೆಲೆ ಏರಿಕೆ ಹೊರೆ ಭರಿಸುತ್ತಿದ್ದು, ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗಳೀಗ ಕೇಳಿಬಂದಿವೆ.
For More Updates Join our WhatsApp Group :




