ಅತ್ತೆ–ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು : ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಆ ಮೂಲಕ 2018ರಲ್ಲಿ ಕೋರ್ಟ್ ಮೇಟ್ಟಿಲೇರಿದ್ದ ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧದ 498ಎ ಕೇಸ್ ಅನ್ನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಸೋಮವಾರ ಆದೇಶ ಹೊರಡಿಸಿದೆ.
ಅತ್ತೆ, ಮಾವ ಹಾಗೂ ನಾದಿನಿ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿ ವಿಚಾರಣೆಯನ್ನು ರದ್ದುಗೊಳಿಸಿದೆ.
ಮದುವೆಗೆ ಮುಂಚೆ ವಧು, ವರರ ಮನೆಯವರ ನಡುವೆ ವರದಕ್ಷಿಣೆ ಅಥವಾ ಮದುವೆಯ ಖರ್ಚುಗಳ ಕುರಿತು ನಡೆದ ಮಾತುಕತೆಯನ್ನಷ್ಟೇ ಆಧಾರವನ್ನಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ, ಮಾವ ಮತ್ತು ನಾದಿನಿ ಕ್ರೌರ್ಯ ಎಸಗಿದ್ದಾರೆ ಎಂಬ ಆರೋಪವನ್ನು ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಆರೋಪಗಳನ್ನು ಮಾನ್ಯಗೊಳಿಸಲು ಮದುವೆಯ ನಂತರ ನಡೆದ ನಿಜವಾದ ಕಿರುಕುಳ, ಹಣ ಅಥವಾ ಆಸ್ತಿ ಕುರಿತ ಬೇಡಿಕೆ, ಒತ್ತಡ ಅಥವಾ ಹಿಂಸೆ ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳಿರಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ದೂರಿನಲ್ಲಿ, ಆರೋಪಪಟ್ಟಿಯಲ್ಲಿ ನಿಖರವಾದ ಸಾಕ್ಷ್ಯಗಳಿಲ್ಲ. ಸಾಮಾನ್ಯ ಜಗಳಗಳು, ದೂಷಣೆಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು. ವೈವಾಹಿಕ ವಿವಾದದಲ್ಲಿ ಅತ್ತೆ, ಮಾವ, ನಾದಿಯನ್ನು ಎಳೆಯಲಾಗಿದೆ. ಪ್ರಕರಣ ಮುಂದುವರಿಯಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದಿರುವ ಪೀಠ ಈ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ
ಮೈಸೂರಿನ ಗೋಕುಲಂ ನಿವಾಸಿ ತೇಜಸ್ನೊಂದಿಗೆ ವಿವಾಹ ಬೆಂಗಳೂರಿನ ವಧುವಿನೊಂದಿಗೆ 2018ರಲ್ಲಿ ಐಟಿಸಿ ಗಾರ್ಡೇನಿಯಾದಲ್ಲಿ ನಿಶ್ಚಿತಾರ್ಥ ಮತ್ತು ಲಲಿತಮಹಲ್ನಲ್ಲಿ ಮದುವೆ ಮಾಡಲಾಗಿತ್ತು. ವಿವಾಹವಾದ 19 ದಿನಗಳಲ್ಲಿ ಉದ್ಯೋಗಿ ಪತಿ ಅಮೆರಿಕಕ್ಕೆ ಹಾರಿದ್ದ. ಪತಿಯಿಂದ ಮಾನಸಿಕ ಹಿಂಸೆ, ಅತ್ತೆ, ಮಾವ, ನಾದಿನಿಯಿಂದ ಕಿರುಕುಳ ಆರೋಪಿಸಿ ಪತ್ನಿ ಆರೇ ತಿಂಗಳಲ್ಲಿ ಪತಿ ಮನೆ ತೊರೆದಿದ್ದರು. ಬಳಿಕ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
For More Updates Join our WhatsApp Group :




