ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ: “ಬಾಲ ಬಿಚ್ಚಿದ್ರೆ ಗಡೀಪಾರು”

ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ: “ಬಾಲ ಬಿಚ್ಚಿದ್ರೆ ಗಡೀಪಾರು”

ಬೃಹತ್ ರೌಡಿ ಪರೇಡ್‌ನಲ್ಲಿ ಕಮಿಷನರ್ ವಾರ್ನಿಂಗ್.

ಹುಬ್ಬಳ್ಳಿ : ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹಳೆ ಸಿಎಆರ್  ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್‌ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಭಾಗಿಯಾಗಿದ್ದರು.

ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ

ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್‌ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ ಕೆದಕಿದ ಕಮಿಷನರ್, ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಯಾರಾದರೂ ಬಾಲ ಬಿಚ್ಚಿದರೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಗರದಿಂದ ಗಡಿಪಾರು ಮಾಡಲಾಗುವುದು ಎಂದು ಅವರು ಗುಡುಗಿದರು. ಈಗಾಗಲೇ ಈ ವರ್ಷ 30ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

816 ಜನರಿಗೆ ರೌಡಿ ಪಟ್ಟಿಯಿಂದ ಮುಕ್ತಿ

ಇದೇ ವೇಳೆ, ಅಪರಾಧ ಲೋಕವನ್ನು ಬಿಟ್ಟು ಸನ್ನಡತೆಯಿಂದ ಬದುಕುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. 2026ರ ಆರಂಭದಲ್ಲಿ ಅವಳಿ ನಗರದಲ್ಲಿ 1,320 ರೌಡಿ ಶೀಟರ್‌ಗಳಿದ್ದರು. ಅವರಲ್ಲಿ ಸನ್ನಡತೆ ತೋರಿದ 816 ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ನಗರದಲ್ಲಿ 510 ಸಕ್ರಿಯ ರೌಡಿ ಶೀಟರ್‌ಗಳಿದ್ದು, ಈ ವರ್ಷ ಹೊಸದಾಗಿ 100ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇರಿಸಿ ರೌಡಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಒಟ್ಟಾರೆಯಾಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಜೈಲೇ ಗತಿ ಎಂಬ ಸಂದೇಶ ರವಾನಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *