ಸ್ನೇಹಿತರು ಜೈಲಿಗೆಹೋದರೆಂಬ ಸಿಟ್ಟಲ್ಲಿ ಅಪ್ರಾಪ್ತನಿಂದ ಕೃತ್ಯ.
ಶಿವಮೊಗ್ಗ: ಜಗಳಬಿಡಿಸಲು ಹೋಗಿ ಅಪ್ರಾಪ್ತರಿಂದ ಭೀಕರವಾಗಿ ಕೊಲೆಯಾಗಿದ್ದ SSLC ವಿದ್ಯಾರ್ಥಿ ಸಂಕೇತ್‌ನ ಸಮಾಧಿ ಧ್ವಂಸಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಕೇತ್ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಆರೋಪಿಗಳ ಅಪ್ರಾಪ್ತ ಸ್ನೇಹಿತನೇ ಈ ಕೃತ್ಯ ಎಸಗಿರೋದು ಬಯಲಾಗಿದ್ದು, ಮಾರ್ಚ್ 31ರಂದು ಸಂಕೇತ್ ಸಮಾಧಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಹಿನ್ನೆಲೆ ಆರೋಪಿ ಪತ್ತೆಗೆ ತೀವ್ರ ತನಿಖೆ ನಡೆಸಿದ್ದ ತುಂಗಾನಗರ ಪೋಲಿಸರು, ಹಲವು ಆಯಾಮಗಳಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದರು. ಅಂತಿಮವಾಗಿ ತ್ತಾಂತ್ರಿಕ ಆಧಾರದ ಹಿನ್ನೆಲೆಯಲ್ಲಿ ಸಮಾಧಿ ಕೆಡವಿದ್ದ ಅಪ್ರಾಪ್ತ ಆರೋಪಿಯನ್ನ ಬಂಧಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಶಿವಮೊಗ್ಗ ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿರೋದನ್ನು ಸಂಕೇತ್ ನೋಡಿದ್ದಾನೆ. ಹೀಗಾಗಿ ಗಿರೀಶ್ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದ. ಆ ವೇಳೆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದ. ಕೂಡಲೇ ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದ. ಇದರಿಂದ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ಯತ್ನ ನಡೆಸಲಾಗಿತ್ತಾದರೂ ಮಾರ್ಗ ಮಧ್ಯೆಯೇ ಆತ ಪ್ರಾಣಬಿಟ್ಟಿದ್ದ. ಫೆ.23ರಂದು ಘಟನೆ ನಡೆದಿತ್ತು.
ಮೃತ ಸಂಕೇತ್‌ನ ಅಂತ್ಯಕ್ರಿಯೆಯನ್ನು ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದ್ದ ಪೋಷಕರು, ಮಗನ ನೆನಪಿಗಾಗಿ ಮಾ.26ರಂದು ಸಮಾಧಿಯನ್ನು ನಿರ್ಮಿಸಿದ್ದರು. ಅದಾಗಿ ಕೆಲ ದಿನಗಳು ಕಳೆಯುವ ಒಳಗಾಗಿಯೇ ಸಂಕೇತ್ ಸಮಾಧಿಯನ್ನೂ ಧ್ವಂಸಗೊಳಿಸಲಾಗಿತ್ತು. ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಲ್ಲದೆ, ಗ್ರಾನೈಟ್ಗಳನ್ನು ಒಡೆದುಹಾಕಲಾಗಿತ್ತು. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆಗಿಳಿದ ಪೊಲೀಸು ಕೊನೆಗೂ ಆರೋಪಿ ಬಾಲಕನನ್ನು ಬಂದಿಸಿದ್ದಾರೆ.
For More Updates Join our WhatsApp Group :



