ಕಾಂಗ್ರೆಸ್ ಪಕ್ಷ ಇರುವುದೇ ಎಲ್ಲ ಸಮುದಾಯಗಳ ಒಳಿತಿಗೆ
ಬೆಂಗಳೂರು: “ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೇ ಇದ್ದೇವೆ. ಪ್ರತಿದಿನ ಜತೆಯಲ್ಲೇ ಕೂರುತ್ತೇವೆ, ಚರ್ಚಿಸುತ್ತೇವೆ. ಎಲ್ಲಿದೆ ನಮ್ಮಲ್ಲಿ ಗುಂಪು ಎಂಬುದು? ಎಲ್ಲರೂ ನಮ್ಮ ಶಾಸಕರೇ. ಮಾಧ್ಯಮಗಳೇ ನಮ್ಮನ್ನು ಇಬ್ಭಾಗ ಮಾಡುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸಿದ್ದರಾಮಯ್ಯ ಅವರೊಟ್ಟಿಗೆ ಒಂದೇ ವಿಮಾನದಲ್ಲಿ ಬಹಳ ದಿನಗಳ ನಂತರ ಪ್ರಯಾಣ ಮಾಡುತ್ತಿದ್ದೀರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಟ್ಟಾದ ಡಿ ಕೆ ಶಿವಕುಮಾರ್ ಅವರು, “ನಿಮಗೆ ತಲೆ ಕೆಟ್ಟಿದೆ ಎನಿಸುತ್ತಿದೆ. ಎಲ್ಲಿದೆ ನನ್ನ ಮತ್ತು ಸಿದ್ದರಾಮಯ್ಯ ಗುಂಪು. ನೀವೇ ಗುಂಪು ಸೃಷ್ಟಿ ಮಾಡುತ್ತಿದ್ದೀರಿ. ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಗುಂಪು ಎಂದು ಹೇಳಿದ್ದೀರಿ. ಅವರೇನೂ ಸಿದ್ದರಾಮಯ್ಯ ಗುಂಪು ಎಂದು ಬೋರ್ಡ್ ಹಾಕಿಕೊಂಡಿದ್ದಾರೆಯೇ? ಅಥವಾ ನನ್ನ ಗುಂಪು ಎಂದು ನಾನು ಬೋರ್ಡ್ ಹಾಕಿಕೊಂಡಿದ್ದೇನೆಯೇ? ಎಲ್ಲ 139 ಶಾಸಕರು ನನ್ನ ಹಾಗೂ ಸಿದ್ದರಾಮಯ್ಯ ಅವರ ಶಾಸಕರೇ ಆಗಿದ್ದಾರೆ. ಯಾವ ಗುಂಪೂ ಇಲ್ಲ, ಬೋರ್ಡೂ ಇಲ್ಲ. ನಿಮಗೆ ಗೊತ್ತಿದೆಯೇ ಯಾರ್ಯಾರ ಗುಂಪು ಏನಿದೆ ಅಂತ? ನಿಮಗೆ ಹೆಂಗೆ ಬೇಕೋ ಹಂಗೆ ಚಟಕ್ಕೆ ಬರೆಯುತ್ತಾ ಇದ್ದೀರಿ” ಎಂದರು.
ನಿಮ್ಮ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರಲ್ಲಾ ಎಂದು ಕೇಳಿದಾಗ, “ಯಾವ ಹೇಳಿಕೆಯೂ ಇಲ್ಲ. ಯಾವ ಗುಂಪೂ ಇಲ್ಲ. 139 ಶಾಸಕರು ನನ್ನದೇ ಗುಂಪು. ಕಾಂಗ್ರೆಸ್ ಗುಂಪು. ನಮಗೆ ಪಕ್ಷ ಹಾಗೂ ಪಕ್ಷದ ಹಿತ ಮುಖ್ಯ. ಪಕ್ಷದ ಅಭಿವೃದ್ಧಿಗೆ ಹಾಗೂ ಅದರ ಒಳಿತಿಗೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ, ಮಾಡುತ್ತೇವೆ” ಎಂದರು.
ದೆಹಲಿ ಭೇಟಿ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಈಗ ಆ ವಿಚಾರ ಚರ್ಚೆಯಿಲ್ಲ. ಮೊದಲು ಚುನಾವಣೆಗಳನ್ನು ಮುಗಿಸೋಣ. ಮೊದಲ ಆದ್ಯತೆ ಚುನಾವಣೆಗೆ. ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮ ನಿಮಿತ್ತ ನಾನು ಹಾಗೂ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದೇವೆ. ಇತರೇ ದೇಶಗಳ ರಾಯಭಾರಿಗಳು, ಉದ್ಯಮಿಗಳು ಸೇರಿದಂತೆ ಅನೇಕರು ಸೇರುತ್ತಿದ್ದಾರೆ. ಐಟಿ ಬಿಟಿ ಸಚಿವರು ಇದನ್ನು ಆಯೋಜಿಸಿದ್ದಾರೆ” ಎಂದು ತಿಳಿಸಿದರು.
For More Updates Join our WhatsApp Group :




