ಮದುವೆಯ 7 ತಿಂಗಳಲ್ಲಿ ದುರಂತ: ಕುಟುಂಬದವಿರುದ್ಧ ಆರೋಪ
ಚಿತ್ರದುರ್ಗ : ಅತ್ತಿಗೆಯ ತಂಗಿ ಹಾಗೂ ಭಾವನ ತಮ್ಮನ ನಡುವೆ ಪ್ರೇಮಾಂಕುರವಾಗಿತ್ತು. ಪೋಷಕರ ವಿರೋಧದ ನಡುವೆ ಏಳು ತಿಂಗಳ ಹಿಂದಷ್ಟೇ ಮದುವೆ ಕೂಡ ಆಗಿದ್ದರು. ಆದರೆ ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತೆ ಅಸಹಜವಾಗಿ ಸಾವಿಗೀಡಾಗಿದ್ದಾಳೆ ಹೀಗಾಗಿ ಇತ್ತ ಪತಿ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಕೋಟೆನಾಡು ಚಿತ್ರದುರ್ಗತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮೀನಾಕ್ಷಿ ಮತ್ತು ಹೊನ್ನೂರಪ್ಪ ದಂಪತಿಯ ಮೊದಲ ಪುತ್ರಿ ಅನು ಹಾಯ್ಕಲ್ ಗ್ರಾಮದ ಮೈಲಾರಿಗೆ ಮದುವೆ ಮಾಡಿಕೊಟ್ಟಿದ್ದರು. ಮೈಲಾರಿ ಸಹೋದರ ವೆಂಕಟೇಶ್, ಅತ್ತಿಗೆಯ ಸಹೋದರಿ ತನುಜಾಳ ಮೇಲೆ ಕಣ್ಣುಹಾಕಿದ್ದ. ಕಾಡಿ-ಬೇಡಿ ಪ್ರೀತಿಸಿ ಸೈ ಎನ್ನಿಸಿಕೊಂಡಿದ್ದ. ತನುಜಾ ಸಹ ಭಾವನ ತಮ್ಮ ವೆಂಕಟೇಶನನ್ನು ಪ್ರೀತಿಸಿದ್ದು, ಪೋಷಕರ ವಿರೋಧದ ನಡುವೆ ಏಳು ತಿಂಗಳ ಹಿಂದೆ ಲವ್ ಮ್ಯಾರೇಜ್ ಆಗಿದ್ದರು.
ನಡೆದಿದ್ದೇನು?
ಏಪ್ರಿಲ್ 21 ರಂದು ತನುಜಾ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ವೆಂಕಟೇಶ್ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದ. ಚಿತ್ರದುರ್ಗ, ದಾವಣಗೆರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೊನೆಗೂ ಚಿಕಿತ್ಸೆ ಫಲಿಸದೆ ತನುಜಾ ಮೃತಪಟ್ಟಿದ್ದಾಳೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ನೋಡಿದರೆ ಪೆಟ್ಟು ಬಿದ್ದು ಸಾವು ಎಂಬುದು ತಿಳಿಯುತ್ತಿದೆ. ಹೀಗಾಗಿ ಪತಿ ವೆಂಕಟೇಶ್ ಮತ್ತು ಆತನ ಕುಟುಂಬಸ್ಥರೇ ಹೊಡೆದು ಕೊಂದಿದ್ದಾರೆ. ಬೈಕಿನಿಂದ ಬಿದ್ದಿದ್ದಾಳೆಂದು ಕಥೆ ಕಟ್ಟುತ್ತಿದ್ದಾರೆ ಎಂದು ಮೃತಳ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ತನುಜಾ ಅಸಹಜ ಸಾವಿನ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪತಿ ವೆಂಕಟೇಶ್ ಮತ್ತು ಕುಟುಂಬಸ್ಥರ ವಿರುದ್ಧ ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಅಸಲಿಯತ್ತು ಬಯಲಾಗಬೇಕಿದೆ.
For More Updates Join our WhatsApp Group :




