ಪ್ರವಾಹ ಮುನ್ನೆಚ್ಚರಿಕೆ, ಚರಂಡಿ ಸ್ವಚ್ಛತೆ, ತುರ್ತು ನಿಯಂತ್ರಣ ಕೊಠಡಿಗಳಿಗೆ ಒತ್ತು
ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ ಎನ್ ರಮೇಶ್ ರವರು ಇಂದು ಮುಂಗಾರು ಪೂರ್ವ ಪ್ರವಾಹ ಪರಿಸ್ಥಿತಿಗಳ ಸೂಕ್ಷ್ಮಾವಲೋಕನ ಕುರಿತು ವಿವಿಧ ವಸತಿ ಸಮುಚ್ಚಯಗಳ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ಸಭೆ ನಡೆಸಿದರು.
ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಗಳನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಆಯುಕ್ತರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳು ಹಾಗೂ ಸಲಹೆಗಳನ್ನು ಸ್ವೀಕರಿಸಿದರು. ಪಾಲಿಕೆ ವತಿಯಿಂದ ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿಯನ್ನು ಪ್ರತಿನಿಧಿಗಳಿಗೆ ತಿಳಿಸಿದರು.
ಸಂವಾದದಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆ, ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ರಸ್ತೆ, ವಾಜರಹಳ್ಳಿ, ಮೆಟ್ರೊ ನಿಲ್ದಾಣ, ಬಿಳೇಕಹಳ್ಳಿ ರಂಕಾ ಕಾಲೋನಿ, ಹೆಚ್.ಎಸ್.ಆರ್ ಲೇಔಟ್ 7ನೇ ಸೆಕ್ಟರ್, ಕೋರಮಂಗಲ 1ನೇ ಬ್ಲಾಕ್, ಸಿಲ್ಕ್ ಬೋರ್ಡ್ ಜಂಕ್ಷನ್, ಜುನ್ನಸಂದ್ರ, ಅಂಬಲಿಪುರ, ಟ್ರಿನಿಟಿ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ನೆರೆಭೀತಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಮುಂದುವರೆದು, ಕಾಲುವೆಗಳ ಶೋಲ್ಡರ್ ಡ್ರೈನ್ ಗಳಲ್ಲಿ ಹೂಳೆತ್ತುವ ಕಾರ್ಯ, ನೀರು ನಿಲ್ಲುವ ಸಮಸ್ಯೆ, ವಾಹನ ಸಂಚಾರದ ಅಡಚಣೆ, ಹಾಗೂ ಚರಂಡಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಬಗ್ಗೆ RWA ಪ್ರತಿನಿಧಿಗಳು ಪ್ರಸ್ತಾಪಿಸಿದರು.
ಈ ವೇಳೆ ಅಭಿವೃದ್ಧಿ ವಿಭಾಗದ ಅಪರ ಆಯುಕ್ತರಾದ ಡಾ||ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಶ್ರೀ ಬಸವರಾಜ ಕಬಾಡೆ ಹಾಗೂ ಶ್ರೀ ಕೆ ವಿ ರವಿ ಮತ್ತು ವಿಪತ್ತು ನಿರ್ವಹಣಾ ಸಮಾಲೋಚಕರಾದ ಡಾ|| ವಿನುತಾ ರವರು ಉಪಸ್ಥಿತರಿದ್ದರು.
For More Updates Join our WhatsApp Group :




