ಸಹೋದರರಿಂದ ಭರವಸೆಯ ಮಾಹಿತಿ – ಚೇತರಿಕೆ ಲಕ್ಷಣಗಳು ಕಾಣಿಕೆ
ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿ ಹೊರಬಂದಿದೆ. ಶ್ವಾಸಕೋಶದ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಸಚಿವರು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರ ಡಿ. ಕುಮಾರ್ ತಿಳಿಸಿದ್ದಾರೆ.
ಡಿ. ಕುಮಾರ್ ಅವರ ಪ್ರಕಾರ, ಸುಧಾಕರ್ ಅವರಿಗೆ ಈಗ ಪ್ರಜ್ಞೆ ಬಂದಿದೆ ಹಾಗೂ ಕಣ್ಣು ತೆರೆಯುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುವ ವಿಶ್ವಾಸ ಇದೆ” ಎಂದು ಕುಟುಂಬಸ್ಥರು ಹೇಳಿದ್ದಾರೆ.ಮೊಣಕಾಲು ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಅವರಿಗೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದ್ದು, ಸಚಿವರು ವೆಂಟಿಲೇಟರ್ ಹಾಗೂ ECMO ನೆರವಿನಿಂದ ಉಸಿರಾಟ ಪಡೆಯುತ್ತಿದ್ದಾರೆ. ಶ್ವಾಸಕೋಶದ ಸ್ಥಿತಿ ಸುಧಾರಣೆಯಾಗದಿದ್ದರೆ ಕಸಿ ಮಾಡುವ ಸಾಧ್ಯತೆಯನ್ನೂ ವೈದ್ಯರು ಸೂಚಿಸಿದ್ದರು.ಸಚಿವರ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳು ಮತ್ತು ಆಪ್ತರಿಗೆ ಇದೀಗ ಕುಟುಂಬದಿಂದ ಬಂದ ಮಾಹಿತಿ ಸ್ವಲ್ಪ ನೆಮ್ಮದಿ ತಂದಿದೆ.
ಸಚಿವರ ಆರೋಗ್ಯ ವಿಚಾರಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.
For More Updates Join our WhatsApp Group :



