ಬೆಂಗಳೂರು ಜಾಗತಿಕ ನಗರಗಳ ಜತೆ ಸ್ಪರ್ಧಿಸುವಂತೆ ಮಾಡಲಾಗುವುದು: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರನ್ನು ವಿಶ್ವದರ್ಜೆಯ ಪ್ರಗತಿಯ ಹಬ್ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸಲು ಸುಸ್ಥಿರ ಉದ್ಯೋಗ ಮತ್ತು ಅಭಿವೃದ್ಧಿ ದತ್ತಿ ಸಂಸ್ಥೆಯೊಂದಿಗೆ ಉದ್ದೇಶ ಪತ್ರಕ್ಕೆ ಸಹಿ ಹಾಕಲಾಗಿದೆ.
ವಿಧಾನಸೌಧದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಹಾಗೂ ISEG ಯ ನಿರ್ದೇಶಕ ಡಾ. ಶಿರೀಶ್ ಸಂಖೆರವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಪರಸ್ಪರ ಸಹಿ ಹಾಕಿ ಪತ್ರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಒಡಂಬಡಿಕೆ ಉದ್ದೇಶದ ಬಗ್ಗೆ ವಿವರಿಸಿ, ಸಲಹೆ ಸೂಚನೆ ನೀಡಿದರು.
“ಬೆಂಗಳೂರಿನಲ್ಲಿ ವಿಶ್ವದರ್ಜೆ ಪ್ರಗತಿ ಹಬ್ ಮಾಡಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆರ್ಥಿಕ ಶಕ್ತಿ ನೀಡಿದ್ದೇವೆ. ಬೆಂಗಳೂರು ಮೆಟ್ರೋಪಾಲಿಟಿನ್ ಪ್ರದೇಶದಲ್ಲಿ ತಲಾದಾಯ 8.850 ಡಾಲರ್ ನಷ್ಟಿದೆ ಇದೆ. ರಾಜ್ಯದ ಸರಾಸರಿಗಿಂತ ದುಪ್ಪಟ್ಟಿದೆ. 8 ಸಾವಿರ ಚದರ ಕಿ.ಮೀಗಿಂತ ಹೆಚ್ಚು ಪ್ರದೇಶದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ದಕ್ಷಿಣ ಜಿಲ್ಲೆಗಳು ಹರಡಿದ್ದು, 1.6 ಕೋಟಿ ಜನ ಇಲ್ಲಿದ್ದಾರೆ. ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ 42% ಕೊಡುಗೆ ಬೆಂಗಳೂರು ನೀಡುತ್ತಿದೆ. ಬೆಂಗಳೂರು ನಗರಕ್ಕೆ 500 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ 2032ರಿಂದ 2037ರ ಅವಧಿಯಲ್ಲಿ ಕೈಗೊಳ್ಳಬೇಕಾದ ಆರ್ಥಿಕ ಮಾಸ್ಟರ್ ಪ್ಲಾನ್ ಅನ್ನು ರೂಪಿಸಲು ಚಿಂತನೆ ನಡೆಸಿದ್ದೇವೆ. ಹೀಗಾಗಿ ಬೆಂಗಳೂರಿಗೆ ಹೊಸ ರೂಪ, ಶಕ್ತಿ ನೀಡಬೇಕು ಎಂದು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
For More Updates Join our WhatsApp Group :




