ಇ-ಖಾತಾ ವ್ಯವಸ್ಥೆಯಲ್ಲಿ ಹೊಸ ಸುಧಾರಣೆ: ಅರ್ಜಿ ಹಿಂತೆಗೆದುಕೊಳ್ಳುವ ಸೌಲಭ್ಯ ಆರಂಭ.
ಬೆಂಗಳೂರು: ತಪ್ಪಾಗಿ ಸಲ್ಲಿಸಲಾದ ಇ-ಖಾತಾ ಅರ್ಜಿಗಳನ್ನು ನಾಗರಿಕರು ಈಗ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ.
ಬೆಂಗಳೂರು ನಗರದ ನಾಗರಿಕ ಸೇವೆಗಳ ಸುಧಾರಣೆಯನ್ನು ಉದ್ದೇಶಿಸಿ ಇ-ಖಾತಾ ವ್ಯವಸ್ಥೆಯಲ್ಲಿ ಮಾಡಲಾದ ಇತ್ತೀಚಿನ ಪರಿಷ್ಕರಣೆಗಳು ಮತ್ತು ಅಭಿವೃದ್ಧಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಟೌನ್ ಹಾಲ್ನಲ್ಲಿ ಇಂದು ವಿಶೇಷ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು.
13.05 ಲಕ್ಷ ಆಸ್ತಿ ಮಾಲೀಕರಿಗೆ ಆನ್ಲೈನ್ ಇ-ಖಾತಾ ಸೇವೆ ಸಕ್ರಿಯ
ನಗರದಲ್ಲಿ ಸುಮಾರು 13.05 ಲಕ್ಷ SAS ಐಡಿ ಆಧಾರಿತ ಆಸ್ತಿಗಳೊಂದಿಗೆ ಸಂಬಂಧಿಸಿದ ನಾಗರಿಕರು ಈಗ ಸುಲಭವಾಗಿ ತಮ್ಮ ಇ-ಖಾತಾ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು. ಇದರಿಂದ ಹಸ್ತಚಾಲಿತ ನಡೆಯುವ ಪ್ರಕ್ರಿಯೆಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಆಡಳಿತದ ಬದ್ಧತೆ:
ಇ-ಖಾತಾ ಅರ್ಜಿ ಮತ್ತು ಅನುಮೋದನಾ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಡಿಜಿಟಲ್ ಆಡಳಿತ, ದಕ್ಷತೆ ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕೆ ಆಡಳಿತ ಬದ್ಧವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಈ ಕಾರ್ಯಾಗಾರದಲ್ಲಿ 5 ನಗರ ಪಾಲಿಕೆಗಳ ಎಲ್ಲಾ ವಲಯಗಳ ಜಂಟಿ ಆಯುಕ್ತರು, ಕಂದಾಯ ಇಲಾಖೆಯ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
For More Updates Join our WhatsApp Group :




