ಮುಂಡಗೋಡಿನಲ್ಲಿ ಮತ್ತೆ ಆ್ಯಕ್ಟೀವ್ ಆದ ಮೀಟರ್ ಬಡ್ಡಿ ಜಾಲ: ಪೊಲೀಸರ ಮಾಸ್ಟರ್ ಪ್ಲಾನ್ ಶುರು..
ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ಚುರುಕುಗೊಂಡಿರುವ ಬೆನ್ನಲ್ಲೇ, ದಂಧೆಯನ್ನು ಬುಡ ಸಮೇತ ಕಿತ್ತುಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮೀಟರ್ ಬಡ್ಡಿ ದಂಧೆ ಕಿಂಗ್ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ಬಳಿಕ ಈ ಜಾಲದ ಚಟುವಟಿಕೆಗಳು ಮತ್ತೆ ಬೆಳಕಿಗೆ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ವಿಶೇಷ ಕಾರ್ಯಾಚರಣೆಗೆ ಪ್ಲಾನ್ ಮಾಡಿದ್ದಾರೆ.
ಜಮೀರ್ ಕೊಲೆ ಪ್ರಕರಣದಲ್ಲಿ ಇದುವರೆಗೆ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೀಟರ್ ಬಡ್ಡಿ ವ್ಯವಹಾರವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈ ನಡುವೆ ಮುಂಡಗೋಡ, ಹಳಿಯಾಳ ಮತ್ತು ದಾಂಡೇಲಿ ಭಾಗಗಳಲ್ಲಿ ಸಕ್ರಿಯವಾಗಿರುವ ಮೀಟರ್ ಬಡ್ಡಿ ದಂಧೆಕೋರರ ಪಟ್ಟಿ ಸಿದ್ಧಪಡಿಸಿರುವ ಪೊಲೀಸರು, ಕೆಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದಾರೆ. ಕಾನೂನುಬಾಹಿರ ಸಾಲ ವ್ಯವಹಾರಗಳಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ದಂಧೆ ವಿರುದ್ಧ ಸಮಗ್ರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇನ್ನೊಂದೆಡೆ, ಈ ದಂಧೆಗೆ ಕೆಲವು ಸ್ಥಳೀಯ ಪೊಲೀಸರ ಬೆಂಬಲವಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ ಜಮೀರ್ ಮೊಬೈಲ್ ಕರೆ ಮತ್ತು ವಾಟ್ಸಪ್ ಸಂಪರ್ಕಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಜಮೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕೆಲ ಪೊಲೀಸರಲ್ಲಿ ಆತಂಕ ಶುರುವಾಗಿದೆ ಎನ್ನಲಾಗಿದೆ.
ಜಮೀರ್ ಕೊಲೆ ಬಳಿಕವಾದರೂ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಸಂಪೂರ್ಣ ನಿರ್ಮೂಲನೆ ಆಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ. ಪೊಲೀಸರ ಈ ಕ್ರಮದಿಂದ ಜನರಲ್ಲಿ ಹೊಸ ನಿರೀಕ್ಷೆ ಮೂಡಿದೆ.
For More Updates Join our WhatsApp Group :




