ಕೆಮೋತ್ಸವ-2026ಕ್ಕೆ ವಿಜ್ಞಾನ ಹಬ್ಬದ ಚಾಲನೆ: ಮೂಲ ವಿಜ್ಞಾನ ಕಲಿಕೆಗೆ ಕುಲಪತಿ ಪ್ರೊ. ರಮೇಶ್ B. ಪ್ರೇರಣೆ

ಕೆಮೋತ್ಸವ-2026ಕ್ಕೆ ವಿಜ್ಞಾನ ಹಬ್ಬದ ಚಾಲನೆ: ಮೂಲ ವಿಜ್ಞಾನ ಕಲಿಕೆಗೆ ಕುಲಪತಿ ಪ್ರೊ. ರಮೇಶ್ B. ಪ್ರೇರಣೆ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಕೆಮೋತ್ಸವ ಸಂಭ್ರಮ: 170 ವಿದ್ಯಾರ್ಥಿಗಳ ವಿಜ್ಞಾನ ಸ್ಪರ್ಧೆ

ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗವು ಕೆಮಿಕಲ್ ಸೊಸೈಟಿ ಮತ್ತು ಸೆಂಟ್ರಲ್ ಕಾಲೇಜಿನ ರಸಾಯನಶಾಸ್ತ್ರ ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ “ಕೆಮೋತ್ಸವ-2026” ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಭಿತ್ತಿಫಲಕವನ್ನು ಅನಾವರಣಗೊಳಿಸುವ ಮೂಲಕ ವಿವಿಧ ಶೈಕ್ಷಣಿಕ ಸ್ಪರ್ಧೆಗಳನ್ನು ಒಳಗೊಂಡ ಈ ವರ್ಣರಂಜಿತ ವಿಜ್ಞಾನ ಹಬ್ಬದ ಆಚರಣೆಗೆ ಕುಲಪತಿಗಳಾದ ಪ್ರೊ. ರಮೇಶ್.ಬಿ. ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಕೆಮೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನದ ತಾಯಿಬೇರಾದ ಮೂಲ ವಿಜ್ಞಾನ ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಉತ್ತೇಜಿಸಿದರು.

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಂಡು ಸಂಶೋಧನೆ ಮತ್ತು ಅನ್ವೇಷಣೆಯ ಮೂಲಕ ದೇಶದ ಪ್ರಗತಿಗೆ ಉಪಯುಕ್ತ ಕೊಡುಗೆ ನೀಡುವತ್ತ ಗಂಭೀರವಾಗಿ ಕಾರ್ಯಪ್ರವೃತ್ತರಾಗುವಂತೆ ಅವರು  ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಚ್.ಹರಿಪ್ರಸಾದ್ ಮಾತನಾಡಿ ಮೈಸೂರು ವಿಶ್ವವಿದ್ಯಾಲಯದ ಸೈನ್ಸ್ ಕ್ಯಾಂಪಸ್ ಎಂದೇ ಹೆಸರಾಗಿದ್ದ ಸೆಂಟ್ರಲ್ ಕಾಲೇಜಿನಲ್ಲಿ 1908 ರಲ್ಲಿ ಸ್ಥಾಪಿತವಾದ ರಸಾಯನಶಾಸ್ತ್ರ ವಿಭಾಗವು ವಿಜ್ಞಾನ ಶಿಕ್ಷಣ ಕ್ಷೇತ್ರದ ಮುನ್ನಡೆಗೆ ಮಹತ್ವದ ಕಾಣಿಕೆ ನೀಡಿದೆ ಎಂದು ವಿವರಿಸಿದರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಿ.ಆರ್. ಚೇತನ, ಪ್ರಾಧ್ಯಾಪಕರಾದ ಪ್ರೊ. ಕೆ. ಶಿವಶಂಕರ್ ಕಾರ್ಯಕ್ರಮದ ಪ್ರಮುಖ ರೂವಾರಿಗಳಾಗಿದ್ದರು. ವಿವಿಧ ವಿಶ್ವವಿದ್ಯಾಲಯಗಳ ಹದಿನೈದು ಕಾಲೇಜುಗಳಿಂದ ಒಟ್ಟು 170 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *