ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಡಬಲ್ ಮರ್ಡರ್: 5 ಕೋಟಿ ಆಸ್ತಿಗಾಗಿ ತಮ್ಮಂದಿರನ್ನೇ ಕೊಂದ ಅಣ್ಣ?
ಮೈಸೂರು: ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಅರ್ಜುನಹಳ್ಳಿಯಲ್ಲಿ ನಡೆದ ಭೀಕರ ಡಬಲ್ ಮರ್ಡರ್ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಳೆಯ ವೈಷಮ್ಯವೇ ಇಬ್ಬರು ಸಹೋದರರ ಕೊ*ಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಘ ಮತ್ತು ಹರ್ವ ಕೊಲೆಯಾದ ದುರ್ದೈವಿಗಳಾಗಿದ್ದು, ಅವರ ತಂದೆಯ ಮೊದಲ ಪತ್ನಿಯ ಮಗ ರೋಹಿತ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಹಲವು ದಿನಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ಕುಟುಂಬದಲ್ಲಿ ಕಲಹ ನಡೆಯುತ್ತಿತ್ತು. ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ಈ ದಾರುಣ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮೃತರ ತಾಯಿ ಭಾವುಕರಾಗಿ ಮಾತನಾಡಿದ್ದಾರೆ. “ಆಸ್ತಿಗಾಗಿ ನನ್ನ ಮಕ್ಕಳನ್ನೇ ಕೊಂದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಆಸ್ತಿಯಿಂದ ನನಗೆ ಪ್ರಯೋಜನವೇ ಇಲ್ಲ. ನನ್ನ ಎಲ್ಲಾ ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆಯುತ್ತೇನೆ” ಎಂದು ಕಣ್ಣೀರಿಟ್ಟಿದ್ದಾರೆ.
ತಾಯಿಯ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕುಟುಂಬದ ಒಳಜಗಳ ಹೇಗೆ ದಾರುಣ ಅಂತ್ಯಕ್ಕೀಡಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಹಾಗೂ ಕೊಲೆ ಹಿಂದಿನ ನಿಖರ ಕಾರಣಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




