ನೋ ಪಾರ್ಕಿಂಗ್ಗೆ ಬ್ರೇಕ್: ಬೆಂಗಳೂರು ರಸ್ತೆಗಳಲ್ಲಿ ಸಂಚಾರಿ ಪೊಲೀಸರ ಕಠಿಣ ಟೋಯಿಂಗ್ ಕ್ರಮ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ.ಟೋಯಿಂಗ್ ಪ್ರಕ್ರಿಯೆಯು ಈಗ ನಗರದಾದ್ಯಂತ ಚುರುಕುಗೊಂಡಿದೆ.ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದ ಬರೋಬ್ಬರಿ 600ಕ್ಕೂ ಹೆಚ್ಚು ವಾಹನಗಳನ್ನು ಟೋ ಮಾಡುವ ಮೂಲಕ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.ವಶಕ್ಕೆ ಪಡೆಯಲಾದ ವಾಹನಗಳಲ್ಲಿ ಕಾರುಗಳ ಸಂಖ್ಯೆಯೇ ಹೆಚ್ಚಿದೆ. ನೋ ಪಾರ್ಕಿಂಗ್ ವಲಯಗಳಲ್ಲಿ ಮತ್ತು ಫುಟ್ಪಾತ್ಗಳ ಮೇಲೆ ನಿಲ್ಲಿಸಲಾಗಿದ್ದ ವಾಹನಗಳನ್ನು ಪೊಲೀಸರು ಕ್ರೇನ್ಗಳ ಮೂಲಕ ಎತ್ತಂಗಡಿ ಮಾಡುತ್ತಿದ್ದಾರೆ.

ಈ ಬಾರಿಯ ಟೋಯಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹಿಂದೆ ಟೋಯಿಂಗ್ ಸಿಬ್ಬಂದಿ ಮೇಲೆ ಕೇಳಿಬರುತ್ತಿದ್ದ ಭ್ರಷ್ಟಾಚಾರ ಮತ್ತು ಅನುಚಿತ ವರ್ತನೆಯ ದೂರುಗಳನ್ನು ತಡೆಗಟ್ಟಲು, ಪ್ರತಿಯೊಂದು ಟೋಯಿಂಗ್ ವಾಹನಕ್ಕೆ ಡ್ಯಾಶ್ ಕ್ಯಾಮ್ ಹಾಗೂ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಜಿಯೋ-ಟ್ಯಾಗ್ ಮೂಲಕ ವಾಹನ ಎತ್ತಿದ ಸ್ಥಳದ ಮಾಹಿತಿ ಮತ್ತು ಡಿಜಿಟಲ್ ರಸೀದಿಯನ್ನು ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ.
ಪ್ರಸ್ತುತ ದಂಡದ ಮೊತ್ತವೂ ಹೆಚ್ಚಾಗಿದ್ದು, ನೋ ಪಾರ್ಕಿಂಗ್ ದಂಡದ ಜೊತೆಗೆ ಸವಾರರು ಟೋಯಿಂಗ್ ಶುಲ್ಕವನ್ನೂ ಪಾವತಿಸಬೇಕಿದೆ. ದ್ವಿಚಕ್ರ ವಾಹನಗಳಿಗೆ 650 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1,000 ರೂ.ಗಳವರೆಗೆ ಟೋಯಿಂಗ್ ಶುಲ್ಕ ವಿಧಿಸಲಾಗುತ್ತಿದೆ.
For More Updates Join our WhatsApp Group :




