ನಾಲ್ಕು ಮನೆಗಳ್ಳತನ ಪ್ರಕರಣ ಭೇದ, ಇಬ್ಬರು ಖದೀಮರು ಅರೆಸ್ಟ್.!
ವಿಜಯನಗರ : ಜಿಲ್ಲೆಯ ಕೂಡ್ಲಿಗಿ ಉಪವಿಭಾಗದಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ತನಿಖೆ ವೇಳೆ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟು, ಸುಳಿವುಗಳನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 14.06 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯೊಂದಿಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳು, ತಂಬ್ರಹಳ್ಳಿ ಠಾಣೆಯ 23/2026ನೇ ಕೇಸು ಹಾಗೂ ಮರಿಯಮ್ಮನಹಳ್ಳಿ ಠಾಣೆಯ 62/2026ನೇ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಮುಖ ಮನೆಗಳ್ಳತನ ಪ್ರಕರಣಗಳು ಭೇದಗೊಂಡಿವೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದ ತಂಡ ಪ್ರಮುಖ ಪಾತ್ರವಹಿಸಿದೆ. ಹಗರಿಬೊಮ್ಮನಹಳ್ಳಿ ಸಿಪಿಐ ಹಾಗೂ ಅವರ ಸಿಬ್ಬಂದಿ, ತಂಬ್ರಹಳ್ಳಿ ಮತ್ತು ಮರಿಯಮ್ಮನಹಳ್ಳಿ ಠಾಣೆಗಳ ಪಿಎಸ್ಐಗಳು ಮತ್ತು ಸಿಬ್ಬಂದಿಯ ಸಮನ್ವಯದ ಕಾರ್ಯಕ್ಕೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸ್ಥಳೀಯ ನಿವಾಸಿಗಳು ಕೂಡ ಪೊಲೀಸರ ತ್ವರಿತ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮತ್ತಷ್ಟು ತನಿಖೆ ಮುಂದುವರೆಸಿದ್ದಾರೆ.
For More Updates Join our WhatsApp Group :




