ಅನ್ನಭಾಗ್ಯ ಜೊತೆ ಸಕ್ಕರೆ, ಎಣ್ಣೆ, ಬೇಳೆ ಉಚಿತ: ರಾಜ್ಯ ಸರ್ಕಾರದ ‘ಇಂದಿರಾ ಕಿಟ್’ ಘೋಷಣೆ
ಬೆಂಗಳೂರು: ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಕರ್ನಾಟಕ ಸರ್ಕಾರ ಮಹತ್ವದ ಸಿಹಿ ಸುದ್ದಿಯನ್ನು ನೀಡಿದೆ. ಜೂನ್ ತಿಂಗಳಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಜೊತೆಗೆ ‘ಇಂದಿರಾ ಕಿಟ್’ ವಿತರಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ಈ ಕುರಿತು ಮಾಹಿತಿ ನೀಡಿದ್ದು, ಕಿಟ್ ವಿತರಣೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ತೊಗರಿಬೇಳೆ, ಸೂರ್ಯಕಾಂತಿ ಅಡುಗೆ ಎಣ್ಣೆ, ಸಕ್ಕರೆ ಹಾಗೂ ಉಪ್ಪು ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುತ್ತದೆ. ರಾಜ್ಯದ 1.26 ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ. ಕುಟುಂಬದ ಸದಸ್ಯರ ಸಂಖ್ಯೆಯನ್ನು ಆಧರಿಸಿ ಕಿಟ್ ಪ್ರಮಾಣವನ್ನು ನಿಗದಿಪಡಿಸಲಾಗಿದೆ. 1 ರಿಂದ 2 ಸದಸ್ಯರ ಕುಟುಂಬಕ್ಕೆ ಅರ್ಧ ಕೆಜಿ, 3 ರಿಂದ 4 ಸದಸ್ಯರ ಕುಟುಂಬಕ್ಕೆ 1 ಕೆಜಿ ಹಾಗೂ 5ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 1.5 ಕೆಜಿ ಪ್ರಮಾಣದ ಕಿಟ್ ನೀಡಲಾಗುತ್ತದೆ.

ಸರ್ಕಾರವು ಈ ಯೋಜನೆಗಾಗಿ 2026-27ನೇ ಸಾಲಿನ ಬಜೆಟ್‌ನಲ್ಲಿ ಸುಮಾರು 6,200 ಕೋಟಿ ರೂ. ಮೀಸಲಿಟ್ಟಿದೆ. ಕೇವಲ ಅಕ್ಕಿ ವಿತರಣೆಗಿಂತ ಪೌಷ್ಟಿಕಾಂಶಯುಕ್ತ ಆಹಾರ ವಸ್ತುಗಳನ್ನು ನೀಡುವ ಮೂಲಕ ಬಡ ಕುಟುಂಬಗಳ ಆರೋಗ್ಯ ಸುಧಾರಿಸುವುದು ಮತ್ತು ಅಕ್ಕಿ ದುರುಪಯೋಗ ತಡೆಯುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಈ ನಿರ್ಧಾರ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ದೊಡ್ಡ ನೆರವಾಗಲಿದೆ.
For More Updates Join our WhatsApp Group :




