ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ; ಸಾಮಾನ್ಯರ ತಿಂಗಳ ಬಜೆಟ್ ಮೇಲೆ ಭಾರೀ ಹೊರೆ
ಬೆಂಗಳೂರು : ಬೆಂಗಳೂರಿನಲ್ಲಿ ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ವಾರ ಅಡುಗೆ ಎಣ್ಣೆ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಅಕ್ಕಿ ಬೆಲೆಯೂ ಗಗನಕ್ಕೇರುವ ಸಾಧ್ಯತೆ ಎದುರಾಗಿದೆ. ಕಚ್ಚಾ ವಸ್ತುಗಳ ಕೊರತೆ ಮತ್ತು ವಿದೇಶಗಳಿಗೆ ಹೆಚ್ಚುತ್ತಿರುವ ಅಕ್ಕಿ ರಫ್ತಿನಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ದಾಸ್ತಾನು ಕಡಿಮೆಯಾಗುತ್ತಿದ್ದು, ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ದರ ಕಿಲೋಗೆ ₹4 ರಿಂದ ₹5ರಷ್ಟು ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹8 ರಿಂದ ₹10ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಒಂದು ಅಕ್ಕಿ ಚೀಲದ ಮೇಲೆ ಈಗಾಗಲೇ ₹55 ರಿಂದ ₹80ರವರೆಗೆ ಹೆಚ್ಚುವರಿ ಹೊರೆ ಬಿದ್ದಿದೆ. ವ್ಯಾಪಾರಿಗಳ ಪ್ರಕಾರ, ಈ ತಿಂಗಳ ಅಂತ್ಯದೊಳಗೆ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿ ಶ್ರೀಲಂಕಾ ಸೇರಿದಂತೆ ವಿದೇಶಗಳಿಗೆ ಹೆಚ್ಚುತ್ತಿರುವ ರಫ್ತು ಪ್ರಮಾಣವನ್ನು ಉಲ್ಲೇಖಿಸಲಾಗಿದೆ. ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗುತ್ತಿದೆ. ಜೊತೆಗೆ ಕೃಷಿ ಉತ್ಪನ್ನಗಳ ಕಚ್ಚಾ ವಸ್ತುಗಳ ಕೊರತೆಯೂ ಬೆಲೆ ಏರಿಕೆಗೆ ಕಾರಣವಾಗಿದೆ.
ಇದೇ ವೇಳೆ ಅಡುಗೆ ಎಣ್ಣೆ ದರವೂ ಏರಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಲೀಟರ್‌ಗೆ ₹3 ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ₹5 ರಿಂದ ₹10ರವರೆಗೆ ಹೆಚ್ಚಳವಾಗಿದೆ. ಇಂಧನ, ಆಟೋ LPG ಹಾಗೂ ಕಮರ್ಷಿಯಲ್ ಸಿಲಿಂಡರ್ ಬೆಲೆಗಳ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಮಧ್ಯಮ ವರ್ಗದ ಜನರಿಗೆ ಈ ಹೊಸ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ.
For More Updates Join our WhatsApp Group :




