ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಕೇಂದ್ರ ಆರಂಭಿಸಿ ಮಾದರಿಯಾದ ಮಹಿಳೆಯರು..!

ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಕೇಂದ್ರ ಆರಂಭಿಸಿ ಮಾದರಿಯಾದ ಮಹಿಳೆಯರು..!

ಗೃಹಲಕ್ಷ್ಮಿ ಯೋಜನೆ ನೆರವಿನಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡ ಸಹೋದರಿಯರು

ಕೊಪ್ಪಳ : ಜಿಲ್ಲೆಯ ಕುಷ್ಟಗಿಯ ತೆಗ್ಗಿಣ ಓಣಿಯ ಮೂವರು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿ ಬದುಕಿನತ್ತ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ಮೋಹಿನಿ ಮತ್ತು ಇನ್ನಿಬ್ಬರು ಸಹೋದರಿಯರು ಸೇರಿ “ಗೃಹಲಕ್ಷ್ಮಿ ರೊಟ್ಟಿ ಕೇಂದ್ರ”ವನ್ನು ಆರಂಭಿಸಿದ್ದು, ತಮ್ಮ ಪರಿಶ್ರಮ ಮತ್ತು ಧೈರ್ಯದ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಬಂದ ಹಣವನ್ನು ಖರ್ಚು ಮಾಡದೇ ಸಂಗ್ರಹಿಸಿ, ಅದನ್ನು ಉದ್ಯಮ ಆರಂಭಿಸಲು ಬಳಸಿರುವುದು ವಿಶೇಷವಾಗಿದೆ. ರೊಟ್ಟಿ ತಯಾರಿಕಾ ಮಿಷನ್, ಹಿಟ್ಟು ಮಿಕ್ಸ್ ಮಾಡುವ ಗ್ರೈಂಡರ್ ಹಾಗೂ ಹಿಟ್ಟಿನ ಗಿರಣಿ ಖರೀದಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಕೇಂದ್ರದ ಮೂಲಕ ಪ್ರತಿದಿನ ರೊಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಮಹಿಳೆಯರು ತಮ್ಮ ಸ್ವಂತ ದುಡಿಮೆಯಿಂದ ಆದಾಯ ಗಳಿಸುತ್ತಿರುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. “ಗೃಹಲಕ್ಷ್ಮಿ ಯೋಜನೆ ಕೇವಲ ನೆರವು ಮಾತ್ರವಲ್ಲ, ನಮ್ಮ ಜೀವನಕ್ಕೆ ಹೊಸ ದಿಕ್ಕು ತೋರಿಸಿದೆ” ಎಂದು ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಪ್ರಯತ್ನವು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದ್ದು, ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಸ್ವಂತ ಉದ್ಯಮ ನಿರ್ಮಿಸಿ ಸ್ವಾಭಿಮಾನದಿಂದ ಬದುಕಬಹುದು ಎಂಬ ಸಂದೇಶವನ್ನು ನೀಡುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಇದು ಪ್ರೇರಣೆಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *