ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಹರಿದು ಬರುತ್ತಿದ್ದು, ತಾಯಿಯ ದರ್ಶನ ಪಡೆಯುತ್ತಿದ್ದಾರೆ.ದೇವಿಗೆ ‘ಸಿಂಹವಾಹಿನಿ’ ಅಲಂಕಾರ ಮಾಡಲಾಗಿದೆ.
ಮುಂಜಾನೆಯಿಂದಲೇ ಬೆಟ್ಟದ ಪಾದದಿಂದ ಭಕ್ತರು ಮೆಟ್ಟಿಲು ಹತ್ತಿದರು. ದಾರಿಯುದ್ದಕ್ಕೂ ಜಯಘೋಷ ಮೊಳಗಿಸಿದರು. ಅರಿಶಿಣ -ಕುಂಕುಮವನ್ನು 1,101 ಮೆಟ್ಟಿಲುಗಳಿಗೆ ಹಚ್ಚಿ ಹರಕೆ ತೀರಿಸುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಪೂಜೆ: ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಆರಂಭವಾಯಿತು. ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಿಗ್ಗೆ 5.30ಕ್ಕೆ ದೇವಿಗೆ ಸಿಂಹವಾಹಿನಿ ಅಲಂಕಾರ ಪೂರ್ಣಗೊಳಿಸಲಾಯಿತು. ನಂತರ ಬೆಳಿಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು. ‘ಗಿಳಿ ಹಸಿರು’ ಬಣ್ಣದ ಸೀರೆ, ಆಭರಣಗಳಿಂದ ಉತ್ಸವ ಮೂರ್ತಿಯನ್ನು ಸಿಂಗರಿಸಲಾಯಿತು.
ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ದೇಗುಲದ ಮುಖ್ಯದ್ವಾರದಲ್ಲಿ ‘ಅಮ್ಮ’ ಎಂದು ಹೂವುಗಳಿಂದ ಬರೆಯಲಾಗಿದೆ. ಗುಲಾಬಿ, ಸೇವಂತಿಗೆ, ಚೆಂಡು ಹೂಗಳಿಂದ ದೇಗುಲದ ನವರಂಗವನ್ನು ಸಿಂಗರಿಸಲಾಗಿದೆ.
ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಎಂದಿನಂತೆ ಜನರು ವಾಹನಗಳನ್ನು ಲಲಿತಮಹಲ್ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಗರ ಬಸ್ ನಿಲ್ದಾಣದಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ.