ಬಿಸಿಲಿನ ಬಿಗಿ ಹಿಡಿತ: ಸಾರ್ವಜನಿಕರಿಗೆ ಸರ್ಕಾರದ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹತ್ವದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಬಿಸಿಲು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕೆಳಕಂಡ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
ಇಲಾಖೆ ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು ಹೀಗಿವೆ
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನ ತಾಪ ಅತಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಪ್ಪಿಸುವುದು ಉತ್ತಮ.
ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯುತ್ತಿರಿ. ಪ್ರಯಾಣದ ವೇಳೆಯಲ್ಲಿ ನೀರಿನ ಬಾಟಲಿಯನ್ನು ಸದಾ ನಿಮ್ಮ ಜೊತೆಯಲ್ಲೇ ಇಟ್ಟುಕೊಳ್ಳಿ.
ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಡಿಲವಾದ ಮತ್ತು ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಹೋಗುವಾಗ ಛತ್ರಿ, ಟೋಪಿ ಮತ್ತು ತಂಪು ಕನ್ನಡಕಗಳನ್ನು ಬಳಸಿ.
ಎಳನೀರು, ಹಣ್ಣಿನ ರಸ, ಮಜ್ಜಿಗೆ ಹಾಗೂ ಓ.ಆರ್.ಎಸ್ (ORS) ದ್ರಾವಣಗಳಂತಹ ಪಾನೀಯಗಳನ್ನು ಸೇವಿಸಿ ದೇಹವನ್ನು ತಂಪಾಗಿಸಿ. ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ.
ಕಾಫಿ, ಟೀ, ಮದ್ಯಪಾನ ಹಾಗೂ ಅತಿಯಾದ ಸಕ್ಕರೆ ಅಂಶವಿರುವ ತಂಪು ಪಾನೀಯಗಳ ಸೇವನೆ ದೇಹಕ್ಕೆ ಹಾನಿಕಾರಕ, ಆದ್ದರಿಂದ ಇವುಗಳನ್ನು ಆದಷ್ಟು ಕಡಿಮೆ ಮಾಡಿ.
ಬಿಸಿಲಿನಲ್ಲಿ ಅತಿಯಾದ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಡಿ, ಇದು ದೇಹವನ್ನು ಬೇಗನೆ ಸುಸ್ತಾಗಿಸುತ್ತದೆ.
ಮನೆಯೊಳಗೆ ತಾಜಾ ಗಾಳಿ ಬರುವಂತೆ ಕಿಟಕಿಗಳನ್ನು ತೆರೆದಿಡಿ ಮತ್ತು ಬಿಸಿಲಿನ ನೇರ ಕಿರಣಗಳನ್ನು ತಡೆಯಲು ಪರದೆಗಳನ್ನು ಬಳಸಿ.
ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ನಿಗಾ ಇರಲಿ. ವಾಹನಗಳನ್ನು ನಿಲ್ಲಿಸಿದಾಗ ಅದರೊಳಗೆ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಕುರಿಸಬೇಡಿ.
ತಲೆಸುತ್ತು, ವಾಕರಿಕೆ, ಅತಿಯಾದ ಬೆವರುವಿಕೆ ಅಥವಾ ಸ್ನಾಯು ಸೆಳೆತದಂತಹ ಸಮಸ್ಯೆಗಳು ಕಂಡುಬಂದಲ್ಲಿ, ತಕ್ಷಣ ವಿಶ್ರಾಂತಿ ಪಡೆಯಿರಿ ಮತ್ತು ಹತ್ತಿರದ ವೈದ್ಯರನ್ನು ಸಂಪರ್ಕಿಸಿ.
For More Updates Join our WhatsApp Group :




