ಬಾಗಲಕೋಟೆ || ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಳ್ಳಲು ಸಿದ್ದು ಬೆಂಬಲಿಗ ಯತ್ನ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಧಾಭಿಮಾನಿಯೋರ್ವ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿ ಗಾಯಗೊಂಡಿರುವ ಘಟನೆ ಬಾಗಲಕೋಟೆಯಲ್ಲಿ ಸೋಮವಾರ ನಡೆದಿದೆ.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ವೇಳೆಯಲ್ಲಿ ಈ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾಕಾರರು ಟೈರ್ ಗಳಿಗೆ ಬೆಂಕಿ ಹಚ್ಚಿ, ಕೇಂದ್ರೀಯ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪೆಟ್ರೋಲ್ ಕ್ಯಾನ್ ವೊಂದನ್ನು ತೆಗೆದುಕೊಂಡ ಸಿದ್ದರಾಮಯ್ಯ ಬೆಂಬಲಿಗ, ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಅಲ್ಲಿಯೇ ಇದ್ದ ಇತರ ಪ್ರತಿಭಟನಾಕಾರನಿಗೂ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ಮಧ್ಯಪ್ರವೇಶಿಸಿ ಇಬ್ಬರನ್ನು ಬೆಂಕಿಯಿಂದ ರಕ್ಷಿಸಿದ್ದಾರೆ. ಗಾಯಾಳುಗಳನ್ನು ಗುಳೇದಗುಡ್ಡ ಬಳಿಯ ನಾಗರಾಲ್ ನಿವಾಸಿ ದ್ಯಾವಪ್ಪ ಮಾಗಿ ಮತ್ತು ಬಿಳಗಿ ತಾಲೂಕಿನ ಗಿರಿಸಾಗರದ ಹನುಮಂತ್ ಎಂದು ಗುರುತಿಸಲಾಗಿದೆ. ಮಾಗಿ ಅವರ ಹಣೆ, ಮುಖ, ಕುತ್ತಿಗೆ, ಎದೆ ಮತ್ತು ಬೆನ್ನಿನ ಹಿಂಭಾಗ ಸೇರಿದಂತೆ ಜಾಸ್ತಿ ಪ್ರಮಾಣದಲ್ಲಿ ಗಾಯವಾಗಿದೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪರಿಸ್ಥಿತಿ ಸದ್ಯ ಸ್ಥಿರವಾಗಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *