ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿಯ ರೈತ ಶ್ರೀಶೈಲ ತೇಲಿ ಸಾಧನೆಯನ್ನು ಶ್ಲಾಘಿಸಿದರು. 35 ಡಿಗ್ರಿಗೂ ಅಧಿಕ ತಾಪಮಾನ ಇರುವ ಗ್ರಾಮದಲ್ಲಿ ರೈತ ಸೇಬು ಬೆಳೆದು ಮಾದರಿಯಾಗಿದ್ದಾರೆ.

ನರೇಂದ್ರ ಮೋದಿ ತಮ್ಮ ಕಾರ್ಯಕ್ರಮದಲ್ಲಿ ‘ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆಯನ್ನು ಉಲ್ಲೇಖಿಸಿದರು. ನಾವು ಹೊಸದೇನಾದರೂ ಮಾಡಬೇಕೆಂದು ನಿರ್ಧಾರ ಮಾಡಿದರೆ, ಅದರ ಗುರಿ ಖಂಡಿತವಾಗಿಯೂ ತಲುಪುತ್ತೇವೆ. ಬೆಟ್ಟಗುಡ್ಡಗಳಲ್ಲಿ ಬೆಳೆಯುವ ಸೇಬು ಹಣ್ಣನ್ನು ನೀವೆಲ್ಲ ಸಾಕಷ್ಟು ತಿಂದಿದ್ದೀರಿ. ಆದರೆ, ನೀವು ಕರ್ನಾಟಕದ ಸೇಬಿನ ರುಚಿ ಆಸ್ವಾದಿಸಿದ್ದೀರಾ? ಎಂದು ನರೇಂದ್ರ ಮೋದಿ ಕೇಳಿದರು.
ನೀವು ಅಚ್ಚರಿಪಡುತ್ತೀರಿ. ಸಾಧಾರಣವಾಗಿ ಸೇಬಿನ ಕೃಷಿಯನ್ನು ಬೆಟ್ಟ ಗುಡ್ಡಗಳ ಮೇಲೆ ಮಾಡಲಾಗುತ್ತದೆ ಎಂದು ನಾವು ತಿಳಿದಿದ್ದೇವೆ. ಆದರೆ ಕರ್ನಾಟಕದ ಬಾಗಲಕೋಟೆಯ ಶ್ರೀಶೈಲ ತೆಲೀ ಬಯಲು ಪ್ರದೇಶದಲ್ಲಿ ಸೇಬು ಬೆಳೆದಿದ್ದಾರೆ. ಅವರ ಕುಳಲಿ ಗ್ರಾಮದಲ್ಲಿ 35 ಡಿಗ್ರಿಗಿಂತ ಅಧಿಕ ತಾಪಮಾನವಿರುತ್ತದೆ. ಆದರೂ ಸೇಬಿನ ಮರಗಳು ಫಲ ನೀಡಲಾರಂಭಿಸಿವೆ ಎಂದು ಮೋದಿ ಬಣ್ಣಿಸಿದರು. ಶ್ರೀಶೈಲ ತೇಲಿ ಅವರಿಗೆ ಕೃಷಿಯ ಬಗ್ಗೆ ಒಲವು ಇತ್ತು. ಆದ್ದರಿಂದ ಅವರು ಸೇಬು ಕೃಷಿಯನ್ನೂ ಪ್ರಯತ್ನಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಇಂದು ಅವರು ನೆಟ್ಟ ಸೇಬು ಮರಗಳಲ್ಲಿ ಹೆಚ್ಚಿನ ಸಂಖ್ಯೆಯ ಹಣ್ಣುಗಳು ಬೆಳೆಯುತ್ತಿವೆ ಮತ್ತು ಅವುಗಳನ್ನು ಮಾರಾಟ ಮಾಡುವ ಮೂಲಕ ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಮೋದಿ ಶ್ಲಾಘಿಸಿದರು. ಸೇಬಿನ ವಿಷಯ ಮಾತನಾಡುವಾಗ ನಮ್ಮ ‘ಕಿನ್ನೌರಿ’ ಸೇಬು ನೆನಪಿಗೆ ಬಂದಿತು. ಸೇಬುಗಳಿಗೆ ಹೆಸರಾಗಿರುವ ಕಿನ್ನೌರ್ನಲ್ಲಿ ಕೇಸರಿಯ ಉತ್ಪಾದನೆ ಆರಂಭವಾಗಿದೆ. ಸಾಧಾರಣವಾಗಿ ಹಿಮಾಚಲ ಪ್ರದೇಶದಲ್ಲಿ ಕೇಸರಿಯ ಕೃಷಿ ಕಡಿಮೆಯೇ ಇರುತ್ತದೆ. ಆದರೆ ಈಗ ಕಿನ್ನೌರ್ನ ಅತಿಸುಂದರ ಸಂಗಲಾ ಕಣಿವೆಯಲ್ಲಿ ಕೂಡಾ ಕೇಸರಿಯ ಕೃಷಿ ಆರಂಭವಾಗಿದೆ. ಇಂತಹದ್ದೇ ಒಂದು ಉದಾಹರಣೆ ಕೇರಳದ ವಯನಾಡಿನಲ್ಲಿ ಕಂಡುಬಂದಿದೆ. ಇಲ್ಲಿ ಕೂಡಾ ಕೇಸರಿ ಕೃಷಿಯಲ್ಲಿ ಯಶಸ್ಸು ದೊರೆತಿದೆ ಎಂದು ಮೋದಿ ಹೇಳಿದರು.
ವಯನಾಡಿನಲ್ಲಿ ಈ ಕೇಸರಿ ಕೃಷಿಯು ಯಾವುದೇ ಹೊಲ ಅಥವಾ ಮಣ್ಣಿನಲ್ಲಿ ಅಲ್ಲದೇ Aeroponics ತಂತ್ರ ಉಪಯೋಗಿಸಿ ಬೆಳೆಯಲಾಗುತ್ತಿದೆ. ಇಂತಹದ್ದೇ ಅಚ್ಚರಿಯ ಸಂಗತಿ ಲಿಚಿ ಇಳುವರಿಯಲ್ಲಿ ಕೂಡಾ ನಡೆದಿದೆ. ಬಿಹಾರ, ಪಶ್ಚಿಮ ಬಂಗಾಳ ಅಥವಾ ಜಾರ್ಖಂಡ್ನಲ್ಲಿ ಲಿಚಿ ಬೆಳೆಯುತ್ತಾರೆಂದು ನಾವು ಕೇಳಿದ್ದೇವೆ. ಆದರೆ ಈಗ ದಕ್ಷಿಣ ಭಾರತ ಹಾಗೂ ರಾಜಸ್ತಾನದಲ್ಲಿ ಕೂಡಾ ಲಿಚಿ ಬೆಳೆ ಬೆಳೆಯಲಾಗುತ್ತಿದೆ ಎಂದು ಮೋದಿ ಮನ್ ಕಿ ಬಾತ್ನಲ್ಲಿ ತಿಳಿಸಿದರು. ತಮಿಳುನಾಡಿನ ಥಿರು ವೀರಾ ಅರಸು ಅವರು ಕಾಫಿ ಕೃಷಿ ಮಾಡುತ್ತಾರೆ. ಕೊಡೈಕೆನಾಲ್ನಲ್ಲಿ ಅವರು ಲಿಚಿ ಸಸಿಗಳನ್ನು ನೆಟ್ಟರು ಮತ್ತು ಅವರ 7 ವರ್ಷಗಳ ಪರಿಶ್ರಮದ ನಂತರ ಈಗ ಆ ಮರಗಳಲ್ಲಿ ಹಣ್ಣು ಬರಲಾರಂಭಿಸಿದೆ. ಲಿಚಿ ಕೃಷಿಯಲ್ಲಿ ದೊರೆತ ಯಶಸ್ಸು ಸುತ್ತಮುತ್ತಲಿನ ಇತರ ರೈತರಿಗೆ ಕೂಡಾ ಪ್ರೇರಣೆ ನೀಡಿತು ಎಂದರು. ರಾಜಾಸ್ತಾನದಲ್ಲಿ ಜಿತೇಂದ್ರ ಸಿಂಗ್ ರಾಣವತ್ಗೆ ಲಿಚಿ ಕೃಷಿಯಲ್ಲಿ ಯಶಸ್ಸು ದೊರೆತಿದೆ. ಈ ಎಲ್ಲಾ ಉದಾಹರಣೆಗಳು ಬಹಳ ಪ್ರೇರಣಾದಾಯಕವಾಗಿವೆ. ನಾವು ಏನಾದರೂ ಹೊಸದನ್ನು ಮಾಡಬೇಕೆಂದು ಸಂಕಲ್ಪ ಮಾಡಿದರೇ, ಕಷ್ಟಗಳ ಹೊರತಾಗಿಯೂ ಎದೆಗುಂದದೇ ಇದ್ದರೆ, ಖಂಡಿತವಾಗಿಯೂ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂದು ಮೋದಿ ಹೇಳಿದರು.
ನನ್ನ ಹೃದಯ ನೋವಿನಿಂದ ಭಾರವಾಗಿದೆ: ಮನ್ ಕಿ ಬಾತ್ ಆರಂಭಿಸಿದ ಮೋದಿ, ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು ಮಾತನಾಡುವಾಗ ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಗಾಮ್ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ ಎಂದರು. ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು. ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಮೋದಿ ಕರೆ ನೀಡಿದರು.