ಬೆಂಗಳೂರು: 2025ರ ಹೊಸ ವರ್ಷವನ್ನು ಇಡೀ ದೇಶವೇ ಅದ್ಧೂರಿಯಾಗಿ ಸ್ವಾಗತಿಸಿದೆ. ಬೆಂಗಳೂರು ವಿಚಾರಕ್ಕೆ ಬಂದರೆ ಹೊಸ ವರ್ಷದಂದು ಪ್ರಯಾಣಿಕರ ಅನೂಕೂಲಕ್ಕಾಗಿ ಬಿಎಂಟಿಸಿ ಬಸ್, ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಹಾಗಾದರೆ ಆ ಒಂದೇ ದಿನ ಮೆಟ್ರೋ ಹಾಗೂ ಬಿಎಂಟಿಸಿಗೆ ಹರಿದು ಬಂದ ಆದಾಯ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಹೊಸ ವರ್ಷಾಚರಣೆ ವೇಳೆ ಅಂದರೆ ಡಿಸೆಂಬರ್ 31ರ ರಾತ್ರಿ ಅಂದರೆ 2025ರ ಜನವರಿ 1ರಂದು ಒಂದೇ ದಿನ ಬಿಎಂಟಿಸಿಗೆ 5.48 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಮತ್ತೊಂದೆಡೆ ನಮ್ಮ ಮೆಟ್ರೊಗೆ 2.17 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಎಂಟಿಸಿ ಆದಾಯ & ಪ್ರಯಾಣಿಕರ ಸಂಖ್ಯೆ: ಹೊಸ ವರ್ಷಾಚರಣೆ ಹಿನ್ನೆಲೆ ಬಿಎಂಟಿಸಿಯು ಕೆಲವು ಮಾರ್ಗಗಳಲ್ಲಿ ಡಿಸೆಂಬರ್ 31ರ ಬೆಳಗ್ಗೆಯಿಂದ ತಡರಾತ್ರಿ 2 ಗಂಟೆವರೆಗೆ ಸಾರಿಗೆ ಸೌಲಭ್ಯ ಕಲ್ಪಿಸಿತ್ತು. ಈ ವೇಳೆ ಬಿಎಂಟಿಸಿ ಬಸ್ಗಳಲ್ಲಿ 35.66 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಿಂದ ಬಿಎಂಟಿಸಿಗೆ 5.48 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ತಿಳಿದುಬಂದಿದೆ. ರಾತ್ರಿ 11ರಿಂದ ತಡರಾತ್ರಿ 2 ಗಂಟೆ ವರೆಗೆ ಎಂ.ಜಿ ರಸ್ತೆಯಿಂದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದ 76 ಬಸ್ಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಬಸ್ಗಳು 2,093 ಕಿಲೋ ಮೀಟರ್ನಷ್ಟು ಓಡಾಟ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿತ್ತು.
ಮೆಟ್ರೋ ಆದಾಯ & ಪ್ರಯಾಣಿಕರ ಸಂಖ್ಯೆ: ಹೊಸ ವರ್ಷಾಚರಣೆ ಹಿನ್ನೆಲೆ ನಮ್ಮ ಮೆಟ್ರೊಗೆ 2.17 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 2 ಗಂಟೆವರೆಗೆ ಮೆಟ್ರೊ ರೈಲುಗಳು ಸಂಚಾರ ಮಾಡಿದವು. ಹಸಿರು ಮತ್ತು ನೇರಳೆ ಮಾರ್ಗದಲ್ಲಿ 8,59,467 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಪೈಕಿ 2.80 ಲಕ್ಷ ಜನರು ಸ್ಮಾರ್ಟ್ ಕಾರ್ಡ್, 914 ಜನರು ದಿನದ ಪಾಸು, 96 ಜನರು 3 ದಿನದ ಪಾಸು ಮತ್ತು 132 ಜನರು 5 ದಿನದ ಪಾಸು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
1.12 ಲಕ್ಷ ಜನರು ಕ್ಯೂಆರ್ ಕೋಡ್, 39,627 ಜನರು ಕ್ಯೂಆರ್ ವಾಟ್ಸಾಪ್ ಹಾಗೂ 59,321 ಜನರು ಕ್ಯೂಆರ್ ಪೇಟಿಎಂ ಬಳಸಿದ್ದಾರೆ. ಇದೇ ವೇಳೆ 3.49 ಲಕ್ಷ ಟೋಕನ್, 11,091 ಎನ್ಸಿಎಂಸಿ ಕಾರ್ಡ್ ಹಾಗೂ 1,029 ಗುಂಪು ಟಿಕೆಟ್ ಪಡೆದಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಜನ ದಟ್ಟಣೆ ಹಿನ್ನೆಲೆ ಡಿಸೆಂಬರ್ 31ರಂದು ರಾತ್ರಿ 11ರಿಂದ ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಬಳಿ ಮೆಟ್ರೋ ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು.