ಜನಿವಾರ ತೆಗೆಸಿದ ಘಟನೆಗೆ ಬ್ರಾಹ್ಮಣ ಮಹಾಸಭಾ ಆಕ್ರೋಶ
ಬೆಂಗಳೂರು : ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮುಖ್ಯಮಂತ್ರಿಗೆ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಜನಿವಾರ ತೆಗೆಸಿದ ಪರೀಕ್ಷಾ ಕೇಂದ್ರದ ಕಾಲೇಜಿನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ. ಜೊತೆಗೆ ಸಂಬಂಧಿಸಿದ ಸಂಸ್ಥೆಗೆ ಕನಿಷ್ಠ 25 ಲಕ್ಷ ರೂ. ದಂಡ ವಿಧಿಸಬೇಕೆಂದು ಒತ್ತಾಯಿಸಲಾಗಿದೆ.
ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮ ಎಂದ ಮಹಾಸಭಾ
ರಾಜ್ಯದಲ್ಲಿ ಜನಿವಾರದ ಜಟಾಪಟಿ ತೀವ್ರವಾಗಿದ್ದು, ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮಡಿವಾಳ ಠಾಣೆಯ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕವಾಗಿ ನೊಂದಿದ್ದಾರೆ.
ಕಳೆದ ವರ್ಷವೂ ಇಂತಹ ಘಟನೆ ನಡೆದಾಗ ಮಹಾಸಭಾ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು ಎಂದು ರಘುನಾಥ್ ತಿಳಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿದೆ ಎಂಬುದಾಗಿ ಆರೋಪಿಸಲಾಗಿದೆ. ಈ ಘಟನೆ ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮ ಎಂದು ಮಹಾಸಭಾ ಅಭಿಪ್ರಾಯಪಟ್ಟಿದೆ.
ಚಿಕ್ಕಬಳ್ಳಾಪುರದಲ್ಲಿಯೂ ಇಂತದ್ದೇ ಘಟನೆ
ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿ ಸಹ ಹೋರಾಟ ನಡೆಯುತ್ತಿದೆ ಎಂದು ರಘುನಾಥ್ ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ವಿಳಂಬವಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಘಟನೆಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.
For More Updates Join our WhatsApp Group :




