ಬೆಳಗಾವಿ: ಸಿಬಿಐ ಅಧಿಕಾರಿಯೆಂದು ನಂಬಿಸಿ, ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಮಾಳಮಾರುತಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಂಜನೇಯ ನಗರದ ನಿವಾಸಿ, ಮೂಲತಃ ಹುಕ್ಕೇರಿ ತಾಲೂಕಿನ ಇಸ್ಲಾಂಪುರದ ದಯಾನಂದ ರಾಮು ಜಿಂಡ್ರಾಳೆ(33) ಬಂಧಿತ ಆರೋಪಿ.
‘ನನ್ನ ಗೆಳೆಯನಿಗೆ ಅಪಘಾತವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ದಯಾನಂದ ನನ್ನಿಂದ 5 ಲಕ್ಷ ರೂ. ಪಡೆದಿದ್ದ. ಹಣ ಮರಳಿಸದೆ ಬೇರೆ ಬೇರೆ ಸಹಿಯುಳ್ಳ 50 ಸಾವಿರ ರೂ. ಮತ್ತು 3 ಲಕ್ಷ ರೂ. ಎರಡು ಚೆಕ್ ಕೊಟ್ಟಿದ್ದಾನೆ’ ಎಂದು ಆಟೋನಗರದ ನಿವಾಸಿ ಅಫ್ಜಲ್ ಬೀಡಿ ಎಂಬವರು ಸೋಮವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ದಯಾನಂದ ಸಿಬಿಐ ಅಧಿಕಾರಿ ಎಂದು ಸುಳ್ಳು ಹೇಳಿ ನಿರುದ್ಯೋಗಿ ಯುವಕರಿಗೆ ಕೆಎಸ್ಆರ್‌ಟಿಸಿ, ಅರಣ್ಯ ಇಲಾಖೆ, ಅಬಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿದ್ದ. ನಿಪ್ಪಾಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ, ಹಾರೂಗೇರಿ ಭಾಗದಲ್ಲಿ ಹಲವರಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿ 10ರಿಂದ 12 ಎಟಿಎಂ ಕಾರ್ಡ್ ಮತ್ತು ಅರಣ್ಯ ಇಲಾಖೆ ಗುರುತಿನ ಚೀಟಿ ಹೊಂದಿದ್ದ. ಇದೀಗ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.