ಸಂಪಾದಕೀಯ || ಆಶಾ ಕಾರ್ಯಕರ್ತೆಯರ ಬೇಡಿಕೆ ಕಡೆಗಣನೆ ಅಮಾನವೀಯ

ಆಶಾ ಕಾರ್ಯಕರ್ತೆಯರ

ಆಶಾ ಕಾರ್ಯಕರ್ತೆಯರ

02.09.2024 : ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನ ಭಾಗವಾಗಿ ಆಶಾ (ಮಾನ್ಯತೆ  ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ) ಎಂಬ ಗ್ರಾಮೀಣ ಆರೋಗ್ಯ ಸ್ವಯಂಸೇವಕರ ಪಡೆಯು ಕರ್ನಾಟಕದಲ್ಲಿ 2007 ರಿಂದ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಈ ಸಾಮಾಜಿಕ ರ್ಕಾಯಕರ್ತೆಯರು ಜಾರಿಗೊಳಿಸುತ್ತಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಾರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಮುಟ್ಟಿಸುವುದಕ್ಕೆ ಕೆಲಸ ಮಾಡುತ್ತಿರುವ ಆಶಾ ರ್ಕಾಯಕರ್ತೆಯರನ್ನು ಹೆಚ್ಚು ಮಾನವೀಯತೆಯಿಂದ ನೋಡಿಕೊಳ್ಳುವ ಬೇಡಿಕೆಗೆ ಪುರಸ್ಕಾರ ಸಿಗದಿರುವುದು ವಿಷಾದಕರ.

ಆರೋಗ್ಯ, ಶಿಕ್ಷಣ ಸೇರಿದಂತೆ ಜನಸಾಮಾನ್ಯರನ್ನು ತಲುಪಬೇಕಾದ ಸರ್ಕಾರದ ಕಾರ್ಯಕ್ರಮಗಳನ್ನು ಅವರಿಗೆ ಮುಟ್ಟಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಗ್ರಾಮೀಣ ಭಾಗದಲ್ಲಿ ದುಡಿಯುತ್ತಿರುವ ಈ ರ್ಕಾಯಕರ್ತೆಯರಿಗೆ ಉದ್ಯೋಗದ ಭದ್ರತೆಯಾಗಲೀ, ಉತ್ತಮ ವೇತನವಾಗಲೀ ಸಿಗುತ್ತಿಲ್ಲ ಎಂಬ ದೂರು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೂ ಸರ್ಕಾರದ ಗಮನ ಹರಿಯುತ್ತಿಲ್ಲ ಎಂಬುದು ವಾಸ್ತವ ಸಂಗತಿ. ಅವರು ಸಂಘಟನೆ ಮಾಡಿಕೊಂಡು ಆಗಾಗ ಒಟ್ಟಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.

 ಕೆಲಸದ ಅವಧಿಯನ್ನು ಹೆಚ್ಚಿಸಿರುವ ಸರ್ಕಾರ ರ್ಕಾಯಕರ್ತೆಯರಿಗೆ ಕನಿಷ್ಠವೇತನದ ಖಾತರಿಯನ್ನೂ ನೀಡುತ್ತಿಲ್ಲ ಎಂಬ ಕೊರಗನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು, ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ಹಲವು ವರ್ಷಗಳು ದುಡಿದು ನಿವೃತ್ತರಾಗುವವರಿಗೆ ಮುಂದಿನ ಬದುಕಿಗಾಗಿ ನಿರ್ದಿಷ್ಟ ಮೊತ್ತದ ಇಡುಗಂಟು ನೀಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಆಶಾ ರ್ಕಾಯಕರ್ತೆಯರ ಪರವಾಗಿ ಸರ್ಕಾರದ ಮುಂದೆ ಇಡಲಾಗುತ್ತಿದೆ. ಅದಕ್ಕೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬ ಕೊರಗು ಉಳಿದುಕೊಂಡಿದೆ. 

ಆಶಾ ರ್ಕಾಯಕರ್ತೆಯರು ಪ್ರಸವಪೂರ್ವ ಆರೈಕೆ, ಸುರಕ್ಷಿತ ಹೆರಿಗೆ, ಬಾಲ್ಯದ ಪೊàಷಣೆ ಮತ್ತು ಆರೈಕೆ, ದಿನನಿತ್ಯದ ಮತ್ತು ಅನಾರೋಗ್ಯದ ಮಕ್ಕಳ ಆರೈಕೆ, ಸಾಮಾನ್ಯ ಆರೈಕೆಯ ಮೂಲಕ ತಾಯಂದಿರು, ಮಕ್ಕಳು ಮತ್ತು ಕುಟುಂಬಗಳಿಗೆ ಅವರು ನೀಡುವ ಆರೈಕೆಯ ನಿರಂತರತೆಯಲ್ಲಿ ಸಕ್ರಿಯರಾಗಿರುವುದನ್ನು ಅವರನ್ನು ಕುರಿತು ನಡೆಸಿದ ಅಧ್ಯಯನಗಳಲ್ಲಿ ದಾಖಲು ಮಾಡಲಾಗಿದೆ. ಮನೆ ಭೇಟಿಗಳು, ಪ್ರಸವಪೂರ್ವ ಸಮಾಲೋಚನೆ, ವಿತರಣಾ ಬೆಂಗಾವಲು ಸೇವೆಗಳು, ಸ್ತನ್ಯಪಾನ ಸಲಹೆ ಮತ್ತು ರೋಗನಿರೋಧಕ ಸಲಹೆಗಳ ಜೊತೆಗೆ ಕ್ಷಯರೋಗಕ್ಕೆ ಔಷಧ ಪೂರೈಕೆ, ಅತಿಸಾರ ಅಥವಾ ನ್ಯುಮೋನಿಯಾ ಹೊಂದಿರುವ ಮಕ್ಕಳ ಆರೈಕೆ, ಗರ್ಭನಿರೋಧಕ ಬಳಕೆ, ಪ್ರಸೂತಿ ಅಪಾಯದ ಚಿಹ್ನೆಗಳನ್ನು ಗುರುತಿಸಿ ಸಂಬಂಧಪಟ್ಟವರಿಗೆ ವರದಿ ಮಾಡುವುದರಲ್ಲಿಯೂ ಅವರ ಪಾತ್ರವನ್ನು ಗುರುತಿಸಲಾಗಿದೆ.

ಆಶಾ ಕಾರ್ಯಕರ್ತೆಯರ ಪಾತ್ರ ಸಮುದಾಯ ಆರೋಗ್ಯ ಕಾರ್ಯಕರ್ತ ಅಥವಾ ಸಾಮಾಜಿಕ ಕಾರ್ಯಕರ್ತನಿಗಿಂತ ಹೆಚ್ಚಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸಾಧನವಾಗಿ ಪರಿಗಣಿಸಲಾಗಿದೆ.

ಈಚೆಗೆ ತುಮಕೂರಿನಲ್ಲಿ ರಾಜ್ಯ ಸಂಯುಕ್ತ ಆಶಾ ರ್ಕಾಯಕರ್ತೆಯರ ಸಂಘ (ಎಐಯುಟಿಯುಸಿ) ಹಮ್ಮಿಕೊಂಡಿದ್ದ ಆಶಾ ರ್ಕಾಯಕರ್ತೆಯರ ಜಿಲ್ಲಾ ಸಮ್ಮೇಳನದಲ್ಲಿ ಈ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟದ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ದುಡಿಯುವ ವರ್ಗ ಸಂಘಟಿತರಾಗದೆ ಸೌಲಭ್ಯಗಳನ್ನು ಪಡೆಯುವುದು ಸಾಧ್ಯವಿಲ್ಲ ಎಂಬ ಸಂದೇಶವನ್ನು ರ್ಕಾಯಕರ್ತೆಯರಿಗೆ ತಿಳಿಸಲಾಗಿದೆ.

ಹಲವು ವರ್ಷಗಳಿಂದ ಉದ್ಯೋಗದ ಭದ್ರತೆ ಇಲ್ಲದೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ತಮ್ಮ ಸಮಯವನ್ನು ನೀಡುತ್ತಿರುವ ಆಶಾ ರ್ಕಾಯಕರ್ತೆಯರು, ಇವರೊಂದಿಗೆ ಅಂಗನವಾಡಿ ರ್ಕಾಯಕರ್ತೆಯರು, ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸುವ ಬಿಸಿಯೂಟ ರ್ಕಾಕಕರ್ತರು ನಿರ್ದಿಷ್ಟ ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವುದನ್ನು ಸರ್ಕಾರದ ಗಮನಕ್ಕೆ ಬರುತ್ತಿದೆ. ಅವರ ಬೇಡಿಕೆಗಳನ್ನು ಈಡೇರಿಸುವುದಕ್ಕಿಂತ ಹೋರಾಟ ತೀವ್ರಗೊಳಿಸಿದಾಗ ಗೌರವ ಧನದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳ ಮಾಡುವ ಉಪಶಮನ ಯತ್ನ ಸರ್ಕಾರದಿಂದ ಆಗುತ್ತಿದೆ.

ಈ ಪರಿಸ್ಥಿತಿ ಬದಲಾಗುವುದು ಅವಶ್ಯಕವಾಗಿದೆ. ವಿವಿಧ ಜಿಲ್ಲೆಗಳಲ್ಲಿಯೂ ಆಶಾ ರ್ಕಾಯಕರ್ತೆಯರ ತಾಲೂಕು ಸಮ್ಮೇಳನಗಳು ನಡೆಯುತ್ತಿವೆ. ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಆಶಾ ರ್ಕಾಯಕರ್ತೆಯರಂತೆಯೇ ಕರ್ನಾಟಕದಲ್ಲಿ ಸುಮಾರು 1.35 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗೌರವಧನದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಆದರೂ ರಾಜ್ಯದಲ್ಲಿ ನಿರುದ್ಯೋಗದ ತೀವ್ರತೆ ಎಷ್ಟರಮಟ್ಟಿಗೆ ಇದೆ ಎಂದರೆ ಅಂಗನವಾಡಿ ರ್ಕಾಯಕರ್ತೆಯರ ಕೆಲಸಕ್ಕೆ ಅರ್ಜಿಗಳನ್ನು ಆಹ್ವಾನಿಸಿದಾಗ ಪದವಿ, ಸ್ನಾತಕೋತ್ತರ ಪದವಿ ಪಡೆದು ಹಳ್ಳಿಗಳಲ್ಲಿ ಉಳಿದುಕೊಂಡಿರುವ ತರುಣಿಯರು ಅದಕ್ಕೆ ಅರ್ಜಿ ಸಲ್ಲಿಸಿರುವುದು ಬೆಳಗಾವಿ ಜಿಲ್ಲೆಯಿಂದ ವರದಿಯಾಗಿತ್ತು. ವಿವಿಧ ಪದವಿಗಳನ್ನು ಮಾಡಿಕೊಂಡಿದ್ದರೂ ಎಲ್ಲಿಯೂ ಉದ್ಯೋಗದ ಅವಕಾಶಗಳು ಇಲ್ಲದಿದ್ದಾಗ ಮನೆ ಬಾಗಿಲಿನಲ್ಲಿ ಅಂಗನವಾಡಿ ರ್ಕಾಯಕರ್ತೆಯರಾಗಿ ಕೆಲಸ ಮಾಡುವುದಕ್ಕೆ ಪದವೀಧರ ಯುವತಿಯರು ಮುಂದಾಗಿರುವ ಪರಿಸ್ಥಿತಿ ಬೆಳಗಾವಿ ಜಿಲ್ಲೆಯೊಂದಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *