ಬೆಂಗಳೂರು: ಅಭಿನವ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ಕೆಡವಿದ ಪ್ರಕರಣದಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ, ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 10 ಗುಂಟೆ ಜಾಗವನ್ನು ಅಭಿಮಾನಿಗಳಿಗೆ ಮೀಸಲಿಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಷ್ಣು ಅಳಿಯ ಅನಿರುದ್ಧ್ ಜತ್ಕರ್ ಕೂಡ ಇದ್ದರು.ಭಾರತಿ ಅವರು, “ಅಭಿಮಾನಿಗಳು ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಸಿಗಬೇಕು. ಅದಕ್ಕಾಗಿ ಸ್ಟುಡಿಯೋದಲ್ಲಿ ಜಾಗ ನೀಡಬೇಕು”ಎಂದು ಸಿಎಂ ಬಳಿ ವಿನಂತಿಸಿದರು.
ಕರ್ನಾಟಕ ರತ್ನ ಬೇಡಿಕೆ
ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬುದು ಅಭಿಮಾನಿಗಳ ದೀರ್ಘಕಾಲದ ಬೇಡಿಕೆ. ಈ ವಿಷಯವನ್ನು ಭಾರತಿ ಅವರು ಸಹ ಸರ್ಕಾರದ ಮುಂದೆ ಇಟ್ಟು, “ನಾನು ಕೇಳುವುದಿಲ್ಲ, ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸಬೇಕು”ಎಂದಿದ್ದಾರೆ.
ಮಂಟಪ ನಿರ್ಮಾಣ ಯೋಜನೆ
ಸ್ಟುಡಿಯೋದ 10 ಗುಂಟೆ ಜಾಗ ದೊರೆತರೆ, ಮಂಟಪವನ್ನು ಸ್ವತಃ ತಮ್ಮ ವೆಚ್ಚದಲ್ಲಿ ನಿರ್ಮಿಸುತ್ತೇನೆ ಎಂದು ಭಾರತಿ ಹೇಳಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಜನ್ಮದಿನವಿದ್ದು, ಸೆಪ್ಟೆಂಬರ್ 17ರೊಳಗೆ ಜಾಗ ಹಂಚಿಕೆ ಆದ್ರೆ ಅದೇ ದೊಡ್ಡ ಉಡುಗೊರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಬಿನೆಟ್ನಲ್ಲಿ ಚರ್ಚೆ ಸಾಧ್ಯತೆ
ಸೆಪ್ಟೆಂಬರ್ 4ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಅಧಿಕೃತ ಒಪ್ಪಿಗೆ ದೊರೆತರೆ ನಾಳೆಯೇ ಘೋಷಣೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
For More Updates Join our WhatsApp Group :




