ಬೆಂಗಳೂರು: ಕರ್ನಾಟದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಸುಮಾರು 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡು ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ. ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆ?
ಕರಾವಳಿ ಪ್ರದೇಶದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಅದರಲ್ಲೂ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕುಂದಾಪುರ ಮತ್ತು ಕಾರ್ಕಳದಲ್ಲಿ ಮಳೆ ತುಸು ಹೆಚ್ಚಿರುವ ನಿರೀಕ್ಷೆ ಇದೆ. ಹವಾಮಾನ ವೈಪರೀತ್ಯದ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ.ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಣ್ಣ ಪ್ರಮಾಣದ ಮಳೆ ಅಥವಾ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ
ಬೆಂಗಳೂರಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಶೇ.80ರಿಂದ 100ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಗಾಳಿಯ ವೇಗ ಗಂಟೆಗೆ 14-20 ಕಿ.ಮೀ. ಇರಲಿದೆ. ನಗರದ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 22-26 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
For More Updates Join our WhatsApp Group :




