UAEನಲ್ಲಿ ಪುರುಷ ನರ್ಸ್​ಗಳಿಗೆ ಉದ್ಯೋಗಾವಕಾಶ

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಪುರುಷ ನರ್ಸ್​ಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಉದ್ಯೋಗ ಒದಗಿಸುತ್ತಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಈ ಹಿಂದೆ ಸ್ಲೋವಾಕಿಯಾದಲ್ಲಿ ಹಲವಾರು ಕನ್ನಡಿಗರಿಗೆ ನಿಗಮದ ಮೂಲಕ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಯುಎಇನಲ್ಲಿ ಪುರುಷ ನರ್ಸ್​ಗಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ಈ ಯೋಜನೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

ಯುಎಇನಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದ ಒಳಗಿನವರಾಗಿರಬೇಕು. 2 ವರ್ಷ ಅನುಭವ ಹೊಂದಿರಲೇಬೇಕು. ಆಯ್ಕೆಯಾಗುವವರಿಗೆ 5 ಸಾವಿರ ಎಇಡಿ (ಮಾಸಿಕ 1,11,000 ರೂ. ವೇತನ), 30 ದಿನ ವೇತನ ಸಹಿತ ರಜೆ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ ಹಾಗು ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತ. ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದೆ. ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕೌಶಲ್ಯಾಭಿವೃದ್ಧಿ ನಿಗಮ ತಿಳಿಸಿದೆ.

ಕೆಎಸ್‌ಡಿಸಿ ಈ ಹಿಂದೆ ಸ್ಲೋವಾಕಿಯಾದಲ್ಲಿ ಐಟಿ, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ-ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಹಲವಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ. ಹಂಗೇರಿಯಲ್ಲೂ 37 ಡ್ರೈವರ್​ಗಳಿಗೆ ಉದ್ಯೋಗ ಒದಗಿಸಿತ್ತು. ವೆಲ್ಡರ್‌ಗಳಿಗೆ ಮಾರಿಷಸ್‌ನಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡಿದೆ.

ಹೆಚ್ಚಿನ ವಿವರಗಳಿಗೆ ಕೆಎಸ್‌ಡಿಸಿ ವೆಬ್​ಸೈಟ್ http://imck.kaushalkar.com ಭೇಟಿ ನೀಡಬಹುದು. hr.imck@gmail.com ಮೇಲ್​ ಐಡಿ ಮೂಲಕ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *