ಒಳಮೀಸಲಾತಿ ನಿಯಮದಡಿ ಬೃಹತ್ ನೇಮಕಾತಿ: ಪರಿಶಿಷ್ಟ ಜಾತಿಗಳಿಗೆ ಹೊಸ ರೋಸ್ಟರ್ ವ್ಯವಸ್ಥೆ
ಬೆಂಗಳೂರು : Government of Karnataka ಹೊಸ ಒಳಮೀಸಲಾತಿ ನೀತಿಯಡಿ ರಾಜ್ಯದಲ್ಲಿ 56,432 ನೇರ ನೇಮಕಾತಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ತಾತ್ಕಾಲಿಕವಾಗಿ ಶೇ.17ರಿಂದ ಶೇ.15ಕ್ಕೆ ಇಳಿಸಿ, ಮೂರು ಪ್ರವರ್ಗಗಳಾಗಿ ಒಳಮೀಸಲಾತಿ ಹಂಚಿಕೆ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಯಾಗಿದೆ.
ಹೊಸ ಹಂಚಿಕೆ ಪ್ರಕಾರ ಪ್ರವರ್ಗ-ಎ ಮತ್ತು ಪ್ರವರ್ಗ-ಬಿ ಗೆ ತಲಾ ಶೇ.5.25 ಹಾಗೂ ಪ್ರವರ್ಗ-ಸಿ ಗೆ ಶೇ.4.5 ಮೀಸಲಾತಿ ನೀಡಲಾಗಿದೆ. ಪ್ರವರ್ಗ-ಸಿ ಅಡಿಯಲ್ಲಿ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಶೇ.20ರಷ್ಟು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಇತರ ಜಾತಿಗಳಿಗೆ ಅವಕಾಶ ನೀಡಲಾಗುತ್ತದೆ.

ನೇಮಕಾತಿ ಪ್ರಕ್ರಿಯೆಗೆ ಹೊಸ 400 ಬಿಂದುಗಳ ರೋಸ್ಟರ್ ಜಾರಿಗೊಳಿಸಲಾಗಿದೆ. 3ಕ್ಕಿಂತ ಕಡಿಮೆ ಹುದ್ದೆಗಳಿದ್ದಲ್ಲಿ ಒಳಮೀಸಲಾತಿ ಅನ್ವಯಿಸದೆ ಎಲ್ಲಾ ಪರಿಶಿಷ್ಟ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ 3ಕ್ಕಿಂತ ಹೆಚ್ಚು ಹುದ್ದೆಗಳಿದ್ದರೆ ಕಡ್ಡಾಯವಾಗಿ ಒಳಮೀಸಲಾತಿ ರೋಸ್ಟರ್ ಅನುಸರಿಸಬೇಕು.
ಈಗಾಗಲೇ ಪ್ರಕಟವಾಗಿರುವ ಒಳಮೀಸಲಾತಿ ಇಲ್ಲದ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು ಹೊಸ ನಿಯಮದಂತೆ ಮರುಪ್ರಕಟಿಸಲು ಸೂಚಿಸಲಾಗಿದೆ. ನ್ಯಾಯಾಲಯವು ಭವಿಷ್ಯದಲ್ಲಿ ಮೀಸಲಾತಿಯನ್ನು ಶೇ.24ಕ್ಕೆ ಹೆಚ್ಚಿಸಿದರೆ, ಹೆಚ್ಚುವರಿ ಶೇ.6 ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳಾಗಿ ಪರಿಗಣಿಸಿ ಭರ್ತಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಒಟ್ಟಾರೆ, ಹೊಸ ಒಳಮೀಸಲಾತಿ ವ್ಯವಸ್ಥೆಯೊಂದಿಗೆ ರಾಜ್ಯದ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡುವ ಪ್ರಯತ್ನವಾಗಿದೆ.
For More Updates Join our WhatsApp Group :




