ಹಿರಿಯ ನಟಿ ಉಮಾಶ್ರೀಗೆ ಕರ್ನಾಟಕ ನಾಟಕ ಅಕಾಡೆಮಿ ‘ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ 2022, 2023 ಮತ್ತು 2024ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಯ ಸಾಧಕರ ಪಟ್ಟಿಯನ್ನು ಇಂದು ಘೋಷಿಸಿತು.

ಈ ಕುರಿತು ಕನ್ನಡ ಭವನದಲ್ಲಿ ಮಾತನಾಡಿದ ನಾಟಕ ಅಕಾಡೆಮಿ ಅಧ್ಯಕ್ಷ ಹಾಗೂ ಕಿರುತೆರೆ ನಟ ಕೆ.ವಿ.ನಾಗರಾಜಮೂರ್ತಿ, ಅಕಾಡೆಮಿ ಪುನರ್ ರಚನೆಯಾಗಿದ್ದು, 2024-25ನೇ ಸಾಲಿಗೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದೆ. ಭಾರತೀಯ ರಂಗಭೂಮಿಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿರುವ ಕನ್ನಡ ರಂಗಭೂಮಿ ಕಳೆದ 5 ದಶಕಗಳಲ್ಲಿ ಸಾಧಿಸಿರುವ ಯಶಸ್ಸು ಅತ್ಯಂತ ಮಹತ್ತರವಾದುದು. ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲೂ ತನ್ನದೇ ಆದ ವಿಶೇಷ ಕೊಡುಗೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ರಂಗಭೂಮಿ ಕಲಾವಿದರನ್ನು ಗುರುತಿಸಿ ಸರ್ಕಾರ ನಾಟಕ ಅಕಾಡೆಮಿ ಮೂಲಕ ಪ್ರತೀ ವರ್ಷ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಪ್ರಸ್ತುತ 2022-23, 2023-24 ಮತ್ತು 2024-25ನೇ ಸಾಲಿನ ಪ್ರಶಸ್ತಿಗಳನ್ನು ನೀಡಬೇಕಾಗಿದ್ದು, 03.08.2024ರಂದು ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆ ಕಲಾವಿದರನ್ನು ಮತ್ತು ನಾಟಕಕಾರರನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಈ ವರ್ಷದ ಪ್ರಶಸ್ತಿಗಳನ್ನು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಜಿಲ್ಲಾವಾರುಗಳಿಗೆ ಅನ್ವಯವಾಗುವಂತೆ ಪ್ರಶಸ್ತಿ ನೀಡಲಾಗುತ್ತಿದೆ. ವಿಶೇಷವಾಗಿ, ಈ ಸಾಲಿನಲ್ಲಿ ಯುವಪ್ರಶಸ್ತಿ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ವಿಶೇಷ.

ರಂಗಭೂಮಿಯಿಂದ ಬಂದು ಬಿಗ್ ಸ್ಕ್ರೀನ್​​ನಲ್ಲಿ ತಮ್ಮದೇ ಆದ ಅಭಿನಯದ ಮೂಲಕ ಕನ್ನಡಿಗರನ್ನು ರಂಜಿಸಿರುವ ಹಿರಿಯ ನಟಿ ಉಮಾಶ್ರೀ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ಉಮಾಶ್ರೀ ಅವರು ಅದೆಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಕೂಡ ಆಗಾಗ್ಗೆ ನಾಟಕಗಳನ್ನು ಮಾಡುತ್ತಿರುತ್ತಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಕೂಡ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಉಮಾಶ್ರೀ ಮರೆತಿಲ್ಲ ಎಂಬುದು ಗಮನಾರ್ಹ.

2023ನೇ ಸಾಲಿಗೆ ನಾಟಕಕಾರ ಹೆಚ್.ಎಸ್.ಶಿವಪ್ರಕಾಶ್ ಹಾಗೂ 2024ನೇ ಸಾಲಿಗೆ ಪ್ರಸಿದ್ಧ ರಂಗಸಂಘಟಕ, ನಾಟಕಕಾರ ಮತ್ತು ಕೋಲಾರದ ಅದಮ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರೂವಾರಿ ಕೆ.ರಾಮಯ್ಯ ಸೇರಿ ಮೂವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ನಾಡಿನ ವಿವಿಧ ಜಿಲ್ಲೆಗಳ ಅತ್ಯುತ್ತಮ ಕಲಾವಿದರ ಜೊತೆಗೆ ಈಗಾಗಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ರೈ, ಬಿ.ಸುರೇಶ್, ಅಚ್ಯುತ್ ಕುಮಾರ್, ರಮೇಶ್ ಪಂಡಿತ್ ಮತ್ತು ಮಕ್ಕಳ ರಂಗಭೂಮಿಯ ನಾಟಕಕಾರರಾದ ಡಾ.ಲಕ್ಷ್ಮಿಪರಿ ಕೋಲಾರ ಮುಂತಾದವರು ವಾರ್ಷಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *