ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಕಾರು, ಬೈಕ್ಗೆ ಡಿಕ್ಕಿ ಸವಾರ ಸಾವು : ಮೂಲತಃ ಮದ್ದೂರು ತಾಲೂಕು ಹಾಲಿ ಕುಣಿಗಲ್ ತಾಲೂಕು ಕೊತ್ತಗೆರೆ ಗ್ರಾಮದ ವಾಸಿ ಪ್ರಜ್ವಲ್ (20) ಮೃತ ದುರ್ದೈವಿ, ಮದ್ದೂರು ತಾಲೂಕು ದೊಡ್ಡ ಅಂಕನಹಳ್ಳಿ ವಾಸಿ ಪ್ರಜ್ವಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚನ್ನಪ್ಪನಗೌಡನಪಾಳ್ಯ ಗ್ರಾಮದ ತಮ್ಮ ಅಜ್ಜಿ ಮನೆಯಲ್ಲಿ ವಾಸವಾಗಿದ್ದನು. ಕುಣಿಗಲ್ ಪಟ್ಟಣಕ್ಕೆ ಪ್ರಜ್ವಲ್ ಕೂಲಿ ಕೆಲಸಕ್ಕೆ ಬರುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರು, ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಹೋಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಜ್ವಲ್ ತೀವ್ರವಾಗಿ ಗಾಯಗೊಂಡಿದ್ದನು. ಗಾಯಾಳುವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಇಲ್ಲಿ ಮೃತಪಟ್ಟಿದ್ದಾನೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ ವೃದ್ದ ಸಾವು : ಅಪರಿಚಿತ ವಾಹನವೊಂದು ವೃದ್ದನೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ದನು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಕೃಷ್ಣಪ್ಪನ ಕೊಪ್ಪಲು ಗ್ರಾಮದ ಬಳಿ ಸಂಭವಿಸಿದೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯ ತಂಗವೇಲು (58) ಮೃತ ವ್ಯಕ್ತಿಯಾಗಿದ್ದಾನೆ. ತಂಗವೇಲು ಗಾರೆ ಕೆಲಸಗಾರ ಎನ್ನಲಾಗಿದ್ದು, ಸಂಜೆ ರಸ್ತೆಯಲ್ಲಿ ಹೋಗುತ್ತಿರ ಬೇಕಾದರೆ ಯಾವುದೋ ವಾಹನ ಒಂದು ಡಿಕ್ಕಿ ಹೊಡೆದ ಕಾರಣ, ತಂಗವೇಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ ಪರಾರಿಯಾಗಿದೆ. ಹುಲಿಯೂರು ದುರ್ಗ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.