ಪ್ಯಾರಿಸ್ : ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿದ್ದ ಭಾರತದ ಸ್ಟಾರ್ ಶೂಟರ್ ಮನು ಭಾಕರ್ಗೆ ನಿರಾಸೆಯಾಗಿದೆ. ಇಂದು ನಡೆದ ಪ್ಯಾರಿಸ್ ಒಲಿಂಪಿಕ್ನ 25ಮೀ. ಮಹಿಳೆಯರ ಪಿಸ್ತೂಲ್ ಸ್ಫರ್ಧೆಯಲ್ಲಿ, 3/4ನೇ ಸ್ಥಾನದ ಎಲಿಮಿನೇಷನ್ ಶೂಟ್ – ಆಫ್ನಲ್ಲಿ ಎಲಿಮಿನೇಟ್ ಆಗಿದ್ದಾರೆ. ಇದರೊಂದಿಗೆ ನಾಲ್ಕನೇ ಸ್ಥಾನ ಪಡೆದ ಮನು ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ.
ಒಂದು ವೇಳೆ ಈ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದರೆ ಒಂದೇ ಒಲಿಂಪಿಕ್ನಲ್ಲಿ 3 ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು. ಆದಾಗ್ಯೂ, ಪ್ಯಾರಿಸ್ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಮನು ಭಾಕರ್ ಈಗಾಗಲೇ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಸುತ್ತಿನ ನಂತರ ಎರಡನೇ ಸ್ಥಾನದಲ್ಲಿದ್ದ ಮನು ನಂತರ 7 ಸುತ್ತು ಅಂತ್ಯದವರೆಗೂ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವ ತವಕದಲ್ಲಿದ್ದರು. ಆದರೆ 8ನೇ ಸುತ್ತಿನಲ್ಲಿ ತನ್ನ 5 ಹೊಡೆತಗಳಲ್ಲಿ ಎರಡರಲ್ಲಿ ಯಶಸ್ಸು ಸಾಧಿಸಿದ ಕಾರಣ 3ನೇ ಸ್ಥಾನದಲ್ಲಿ ಉಳಿಯಲು ಶೂಟ್-ಆಫ್ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಈ ಇದರಲ್ಲಿ ಹಂಗೇರಿಯ ಶೂಟರ್ ವೆರೋನಿಕಾ ಮೇಜರ್ ಮನು ಅವರನ್ನು ಹಿಂದಿಕ್ಕಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.