ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಮುಡಾದ ಮಾಜಿ ಅಧ್ಯಕ್ಷರಾದ ಬಸವನಗೌಡ, ಹೆಚ್.ವಿ.ರಾಜೀವ್ ಹಾಗೂ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಆರೋಪದಡಿ ಎನ್.ಆರ್.ರಮೇಶ್ ದೂರು ದಾಖಲಿಸಿದ್ದಾರೆ.
ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಬದಲಿ ನಿವೇಶನ ಪಡೆದು ಈ ಮೂಲಕ 40 ಕೋಟಿಗಿಂತ ಹೆಚ್ಚು ಹಣ ಸರ್ಕಾರದ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 1997ರಂದು ದೇವನೂರು 3ನೇ ಹಂತದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಕೆಸರೆ ಗ್ರಾಮದ ಸುತ್ತಮುತ್ತ ನೂರಾರು ಎಕರೆ ಜಮೀನನ್ನ ಮೂಡಾ ಭೂಸ್ವಾಧೀನ ಮಾಡಿಕೊಂಡಿತ್ತು.
ಸಿಎಂ ಪತ್ನಿ ಹೆಸರಿನಲ್ಲಿರುವ 3.16 ಎಕರೆ ಸ್ವಾಧೀನಪಡಿಸಿಕೊಂಡು ಬಳಿಕ 1998ರಲ್ಲಿ ಭೂಸ್ವಾಧೀನದಿಂದ ಕೈ ಬಿಟ್ಟಿತ್ತು. 2005ರಲ್ಲಿ ವ್ಯವಸ್ಥಾಯ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿತ್ತು. ಸಿದ್ದರಾಮಯ್ಯ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿದ್ದ ಭೂಮಿಯನ್ನ ಸಹೋದರಿ ಪಾರ್ವತಿಗೆ ಭೂ ದಾನ ಮಾಡಿದ್ದರು.
ದಾನಪತ್ರದ ಮೂಲಕ ತಮಗೆ ದೇವನೂರಿನ 3ನೇ ಹಂತದಲ್ಲಿರುವ ಸ್ವತ್ತಿಗೆ ಬದಲಿ ನಿವೇಶನ ನೀಡುವಂತೆ ಪಾರ್ವತಿ ಅವರು 2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಮುಡಾವು ಅಭಿವೃದ್ಧಿ ಪಡಿಸಿದ್ದ ವಿಜಯನಗರದಲ್ಲಿ 38.284 ಅಡಿ ವಿಸ್ತೀರ್ಣ ಜಾಗವನ್ನ ಶೇ.50:50ರಷ್ಟು ಅನುಪಾತದಲ್ಲಿ ನಿವೇಶನ ರೂಪದಲ್ಲಿ ನೀಡಿತ್ತು.
ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ B. M. ಪಾರ್ವತಿಯವರ ಹೆಸರಿಗೆ 2021-2022ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಎನ್.ಆರ್. ರಮೇಶ್ ಆಪಾದಿಸಿದ್ದಾರೆ.