ಬೆಂಗಳೂರು: ವಿಧಾನಸಭೆ ಮಳೆಗಾಲ ಅಧಿವೇಶನ ಅಂತ್ಯಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆಯೇ ಸದನದಲ್ಲಿ ಮೂಡಾ ಹಗರಣ ಕೋಲಾಹಲ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮುಡಾ ಬದಲಿ ನಿವೇಶನ ಹಂಚಿಕೆ ಆರೋಪದ ಸಂಬಂಧ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ
ವಿಧಾನಸಭೆಯಲ್ಲಿ ಬೆಳಗ್ಗೆ ಚರ್ಚೆಗೆ ಅವಕಾಶ ನೀಡದ್ದಕ್ಕೆ ಸಿಟ್ಟಾಗಿರುವ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಈಗ ವಿಧಾನಸಭೆ-ಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಯಸಿರುವ ಬಿಜೆಪಿ, ಶನಿವಾರದ ನಂತರ ಮೈಸೂರಿಗೆ ಪಾದಯಾತ್ರೆ ನಡೆಸುವ ಬಗ್ಗೆಯೂ ಆಲೋಚಿಸಿದೆ
ಸದನದ ಹೊರಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ವಾಲ್ಮೀಕಿ-ಮುಡಾ ಹಗರಣಗಳ ಸಂಬಂಧ ಹೋರಾಟಕ್ಕೆ ಆಡಳಿತ ಪಕ್ಷದಿಂದಲೇ ಒತ್ತಡ ಇದೆ. ಇಷ್ಟು ದೊಡ್ಡ ಹಗರಣ ನಡೆದಿದೆ. ನೀವೇನೂ ಹೋರಾಟ ಮಾಡುದಿಲ್ಲವೇ ಎಂದು ನಮ್ಮನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಗ್ಗೆ ವಿಧಾನಸಭೆಯಲ್ಲಿ ವಾಕ್ಸಮರ ನಡೆಯಿತು. ನಿಲುವಳಿ ಸೂಚನೆಗೆ ವಿಪಕ್ಷ ನಾಯಕ ಅಶೋಕ್ (R Ashok) ಮುಂದಾದರು. ಮುಖ್ಯಮಂತ್ರಿಗಳೇ ನೇರವಾಗಿ ಪಾಲುದಾರರು. ಇದು ತುರ್ತು ವಿಷಯ. ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಅಶೋಕ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಅಷ್ಟು ಅರ್ಜೆಂಟ್ ಇದ್ದರೆ ಕಳೆದ ವಾರವೇ ಪ್ರಸ್ತಾಪ ಮಾಡಬೇಕಿತ್ತು. ಪ್ರಶ್ನೋತ್ತರ ಮುಗಿದ ಬಳಿಕ ತೆಗೆದುಕೊಳ್ಳೋಣ ಎಂದು ಹೇಳಿದರು
ಪ್ರಶ್ನೋತ್ತರ ಅವಧಿ ಬಿಡಿ ಮುಡಾ ಅಕ್ರಮದ ಚರ್ಚೆಗ ತೆಗೆದುಕೊಳ್ಳಿ ಅಂತ ಬಿಜೆಪಿಗರು ಒತ್ತಾಯಿಸಿದ್ರು. ಎದ್ದು ನಿಂತ ಸಚಿವ ಬೈರತಿ ಸುರೇಶ್, ಬಿಜೆಪಿಗರ ಭ್ರಷ್ಟಾಚಾರವೂ ಇದೆ. ಚರ್ಚೆ ನಡೆಯಲಿ ಎಂದರು.
ಈ ವೇಳೆ ಬಸನ ಗೌಡ ಪಾಟೀಲ್ ಯತ್ನಾಳ್ ಮಧ್ಯ ಪ್ರವೇಶಿಸಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ. ಕ್ಲೀನ್ ಆಲ್ ಪಾರ್ಟಿ ಆಗಬೇಕು. ಸಿದ್ದರಾಮಯ್ಯ ಒಬ್ಬರನ್ನೇ ಟಾರ್ಗೆಟ್ ಮಾಡೋದಲ್ಲ; ಅಡ್ಜಸ್ಟ್ಮೆಂಟ್. ಮ್ಯಾಚ್ ಫಿಕ್ಸಿಂಗ್ ಎಲ್ಲವೂ ಬರಲಿ ಎಂದು ಹೇಳಿದರು.