ಮೈಸೂರು ದಸರಾ 2024 : ನಾಳೆಯಿಂದ ಗಜಪಯಣ ಆರಂಭ | Mysore Dasara

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಯ ಮೊದಲ 9 ಆನೆಗಳಿಗೆ ನಾಳೆ (ಆಗಸ್ಟ್‌ 21) ವೀರನಹೊಸಳ್ಳಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣ ಆರಂಭವಾಗಲಿದೆ. ನಂತರ ಮೈಸೂರಿಗೆ ಆಗಮಿಸಲಿದ್ದು, ಗಜ ಪಯಣದ ಕುರಿತು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ ಐ. ಬಿ. ಅವರು ಮಾಧ್ಯಮಗೋಷ್ಟಿಯಲ್ಲಿ ಹೇಳಿದರು.

ಅಭಿಮನ್ಯು ನೇತೃತ್ವದ 9 ಗಜಗಳ ಪಡೆಯನ್ನು ಬೆಳಗ್ಗೆ 10.20 ರಿಂದ 10.45 ವರಗಿನ ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುವುದು. ಗಜ ಪಡೆಯನ್ನು ದಸರಾಗೆ ಸ್ವಾಗತ ಮಾಡುವ ಮೂಲಕ ದಸರಾ 2024 ರ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ಸಿಗಲಿದೆ.

ಇದಾದ ಬಳಿಕ ವೀರನಹೊಸಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೇರಿದಂತೆ ಹಲವು ಗಣ್ಯರು ಬಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಆನೆ ಮಾವುತರಿಗೆ, ಕಾವಾಡಿಗಳಿಗೆ ಸನ್ಮಾನ ಮಾಡಲಾಗುತ್ತದೆ.

ಈ ಬಾರಿ ದಸರಾದಲ್ಲಿ 14 ಆನೆಗಳು ಭಾಗಿ: ಈ ಬಾರಿ ನಾಡ ಹಬ್ಬ ದಸರಾದಲ್ಲಿ ಒಟ್ಟು 14 ಆನೆಗಳು ಭಾಗವಹಿಸಲಿವೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಹಾಗೂ 2ನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಆಯ್ಕೆ ಮಾಡಲಾಗಿದ್ದು , ಅಗತ್ಯವಿದ್ದರೆ ಮೀಸಲು ಆನೆಗಳನ್ನ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ. ಗಜ ಪಯಾಣದ ಮೂಲಕ 9 ಆನೆಗಳು ಮೈಸೂರಿಗೆ ಬರಲಿವೆ. ಆಗಸ್ಟ್‌ 23 ರಂದು ಈ 9 ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳಲಾಗುವುದು. ಆಗಸ್ಟ್​ 21 ರಿಂದ 23ರ ವರೆಗೆ ಅಂದ್ರೆ 2 ದಿನಗಳ ಕಾಲ 9 ಆನೆಗಳು ಅರಣ್ಯ ಭವನದಲ್ಲಿ ವಾಸ್ತವ್ಯ ಹೊಡಲಿವೆ.

ನಾಡಹಬ್ಬಕ್ಕೆ ಆಗಮಿಸುವ ಆನೆಗಳ ವಿವರ: ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್‌ (25), ರೋಹಿಣಿ (22), ಲಕ್ಷ್ಮೀ (53), ವರಲಕ್ಷ್ಮಿ (67), ಏಕಲವ್ಯ (38) ಆನೆಗಳು ಮೊದಲ ಗಜಪಯಾಣದಲ್ಲಿ ಮೈಸೂರಿಗೆ ಬರಲಿವೆ.

Leave a Reply

Your email address will not be published. Required fields are marked *