ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ನೀಟ್ ರದ್ದು; CET ಕೌನ್ಸೆಲಿಂಗ್ ವಿಳಂಬದ ಭೀತಿ.!
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದರಿಂದ, ಕರ್ನಾಟಕದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸಿಇಟಿ (CET) ಕೌನ್ಸೆಲಿಂಗ್ ಪ್ರಕ್ರಿಯೆಯೂ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ಈ ನಿರ್ಧಾರದಿಂದಾಗಿ ರಾಜ್ಯದ ಸುಮಾರು 3.31 ಲಕ್ಷ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.ಹೌದು, ರಾಜ್ಯದ 3.31 ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದಿದ್ದಾರೆ. ಅದೇ ರೀತಿ ರಾಜ್ಯದ 1.45 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ.ವೈದ್ಯಕೀಯದಲ್ಲಿ ರಾಜ್ಯ ಕೋಟಾದ 10,559 ಸೀಟುಗಳು ಲಭ್ಯವಿವೆ. ನೀಟ್ ಅರ್ಹತಾ ಪಟ್ಟಿ ಆಧಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೀಟುಗಳನ್ನು ಹಂಚಿಕೆ ಮಾಡುತ್ತದೆ.
ವೈದ್ಯಕೀಯ ಸೀಟುಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಬಳಿಕ ಸಿಇಟಿ ಅರ್ಹತಾ ಪಟ್ಟಿಯ ಪ್ರಕಾರ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗುವುದು. ಈಗ ನೀಟ್ ಪರೀಕ್ಷೆ ರದ್ದಾಗಿರುವುದರಿಂದ ಸಿಇಟಿ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ಕೌನ್ಸೆಲಿಂಗ್ ನಡೆಸುವ ಬಗ್ಗೆಯೂ ಕೆಎ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮೇ 3, 2026 ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯು ರಾಜಸ್ಥಾನದಲ್ಲಿ ಸೋರಿಕೆಯಾಗಿತ್ತು. ಸೋರಿಕೆಯಾದ ‘ಗೆಸ್ ಪೇಪರ್’ ಅಥವಾ ಸಂಭಾವ್ಯ ಪ್ರಶ್ನೆಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗಿದ್ದವು.
ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ರದ್ದತಿಯನ್ನು ಆಘಾತಕಾರಿ ಎಂದು ಕರೆದಿದ್ದಾರೆ. ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಎನ್‌ಟಿಎ (NTA) ವೈಫಲ್ಯವನ್ನು ತೋರಿಸುತ್ತದೆ ಮತ್ತು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ವೈದ್ಯಕೀಯ ಸೀಟು ಹಂಚಿಕೆಯ ಜವಾಬ್ದಾರಿಯನ್ನು ಮರಳಿ ರಾಜ್ಯ ಸರ್ಕಾರಗಳಿಗೇ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
For More Updates Join our WhatsApp Group :




