ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. 30 ವರ್ಷದ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಸಂಜೆ ನಡೆದ ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಹೆಚ್ಚು ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಅಂಗೂರಿ ಬಾಯಿ ನಗರದ ಲಾಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ ಟೌನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ಹೇಳಿದ್ದಾರೆ. ಶಾಲೆಯೊಂದರಲ್ಲಿ ಕೇರ್ ಟೇಕರ್ ಆಗಿದ್ದ ಅಂಗೂರಿ ಆಗಾಗ್ಗೆ ಪತಿಯೊಂದಿಗೆ ಜಗಳವಾಡುತ್ತಿದ್ದಳು. ಭಾನುವಾರ ಸಂಜೆ ಕೂಡ ಪತಿಯೊಂದಿಗೆ ಜಗಳವಾಡಿದ್ದಳು. ಇದಾದ ನಂತರ ಮಹಿಳೆ ತನ್ನ ಮನೆಯ ಛಾವಣಿಯ ಮೇಲೆ ಹತ್ತಿದಳು.
ಮೇಲ್ಛಾವಣಿಯನ್ನು ಹತ್ತಿದ ನಂತರ ಅಂಗೂರಿ ಬಾಯಿ ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕೆಯ ಪತಿ ಮತ್ತು ನೆರೆಹೊರೆಯವರು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಅವಳು ಒಪ್ಪಲಿಲ್ಲ. ಪತಿ ಮತ್ತೆ ಆಕೆಯನ್ನು ಹಿಡಿಯಲು ಬಂದ ಕೂಡಲೇ ಮೇಲಿನಿಂದ ಜಿಗಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.