ಪಂದ್ಯದ ಟಿಕೆಟ್​ಗಾಗಿ ಟ್ರ್ಯಾಕ್ಟರ್​ ಮಾರಿದ ಪಾಕ್​ ಅಭಿಮಾನಿ

ನ್ಯೂಯಾರ್ಕ್ (ಯುಎಸ್): ಭಾರತ ತಂಡ ಪಾಕಿಸ್ತಾನದ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಏಳನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ದೇಶದ ಹಲವೆಡೆ ಕ್ರಿಕೆಟ್​ ಪ್ರಿಯರು ಸಾಂಪ್ರದಾಯಿಕ ಎದುರಾಳಿಯ​ ವಿರುದ್ಧದ ಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅತ್ತ ಪಾಕ್​ನಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು​ ನಿರಾಸೆಗೆ ಒಳಗಾಗಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬ ನ್ಯೂಯಾರ್ಕ್​​ನಲ್ಲಿ ಪಂದ್ಯ ವೀಕ್ಷಣೆಗೆ ತನ್ನ ಟ್ರ್ಯಾಕ್ಟರ್​​ ಅನ್ನೇ​ ಮಾರಾಟ ಮಾಡಿದ್ದು, ತಂಡವು ಸೋತಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಪಾಕ್​ಗೆ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದ ವೇಗಿ ಜಸ್ಪ್ರೀತ್​ ಬುಮ್ರಾ (14ಕ್ಕೆ 3) ಗೆಲುವಿನ ಕನಸಿಗೆ ತಣ್ಣೀರೆರಚಿದರು. ಪಾಕಿಸ್ತಾನದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಲ್ಲದೇ, ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್​ನಲ್ಲಿ ಮಿಂಚಿದ ರಿಷಭ್​ ಪಂತ್​ ಅಮೂಲ್ಯ 42 ರನ್​ ಬಾರಿಸಿದ್ದಲ್ಲದೇ, ಕೀಪಿಂಗ್​ನಲ್ಲಿ ಮೂರು ಉತ್ತಮ ಕ್ಯಾಚ್​ಗಳನ್ನು ಹಿಡಿದು ತಂಡದ ಮೇಲುಗೈಗೆ ನೆರವಾಗಿದ್ದರು. ಅಮೆರಿಕದ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತವು ದಾಖಲೆಯ ವಿಜಯ ಸಾಧಿಸಿ, ಎ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿದೆ.

ಈ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಭಿಮಾನಿ, “ನಾನು 3,000 ಅಮೆರಿಕನ್​ ಡಾಲರ್ ಮೌಲ್ಯದ ಟಿಕೆಟ್ ಪಡೆಯಲು ನನ್ನ ಟ್ರ್ಯಾಕ್ಟರ್ ಮಾರಾಟ ಮಾಡಿದ್ದೇನೆ. ಭಾರತದ ಸ್ಕೋರ್ ನೋಡಿದಾಗ ನಮ್ಮ ತಂಡವು ಸೋಲುತ್ತದೆ ಎಂದು ಭಾವಿಸಿರಲಿಲ್ಲ. ಪಾಕ್​ ಜಯ ಸಾಧಿಸಬಹುದಾದ ಮೊತ್ತ ಎಂದುಕೊಂಡಿದ್ದೆ. ಗೆಲುವು ನಮ್ಮ ಕೈಯಲ್ಲಿತ್ತು. ಆದರೆ, ಬಾಬರ್ ಆಜಮ್ ಔಟಾದ ಬಳಿಕ ಪಂದ್ಯ ತಿರುಗಿತು. ಗೆಲುವಿಗಾಗಿ ನಾನು ಭಾರತೀಯ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.

Leave a Reply

Your email address will not be published. Required fields are marked *