KSDLಗೆ ದಾಖಲೆ ಸಾಧನೆ: ಕಾರ್ಮಿಕರಿಂದ ಅಭಿನಂದನೆ.

KSDLಗೆ ದಾಖಲೆ ಸಾಧನೆ: ಕಾರ್ಮಿಕರಿಂದ ಅಭಿನಂದನೆ.

ಕೆ.ಎಸ್.ಡಿ.ಎಲ್ ಸಾಧನೆ: ಸಚಿವ ಎಂ ಬಿ ಪಾಟೀಲರಿಗೆ ಕಾರ್ಮಿಕರ ಸಂಘದ ಅಭಿನಂದನೆ.!

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆ.ಎಸ್.ಡಿ.ಎಲ್) 2025-26ನೇ ಸಾಲಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿ, 507 ಕೋಟಿ ರೂ. ನಿವ್ವಳ ಲಾಭ ದಾಖಲಿಸಿರುವುದು ಅಭೂತಪೂರ್ವ ಸಾಧನೆಯಾಗಿದೆ. ಇದರ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ದೂರಗಾಮಿ ಚಿಂತನೆಗಳಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಅಭಿನಂದನಾರ್ಹರು ಎಂದು ಸರಕಾರಿ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘವು ಹೇಳಿದೆ.

ತಮ್ಮ ಅಧ್ಯಕ್ಷ ಮೈಕೇಲ್ ಫರ್ನಾಂಡಿಸ್ ನೇತೃತ್ವದಲ್ಲಿ ಸಚಿವರನ್ನು ಗುರುವಾರ ಇಲ್ಲಿನ ಅವರ ನಿವಾಸದಲ್ಲಿ ಭೇಟಿಯಾದ ಸಂಘದ ಪದಾಧಿಕಾರಿಗಳು, ಇದಕ್ಕಾಗಿ ಸಚಿವರನ್ನು ಅಭಿನಂದಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಫರ್ನಾಂಡಿಸ್ ಅವರು, ಸಾಬೂನು ಕಾರ್ಖಾನೆಯು ತನ್ನ 110 ವರ್ಷಗಳ ಇತಿಹಾಸದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸಿದ್ದು, 47,494 ಮೆಟ್ರಿಕ್ ಟನ್ ಉತ್ಪಾದನೆ ದಾಖಲಿಸಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇದಕ್ಕೆ ಪಾಟೀಲರ ದೂರದೃಷ್ಟಿಯ ಚಿಂತನೆಯೇ ಕಾರಣವಾಗಿದೆ. ಇವರ ಜತೆಗೆ ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡರ ಕೊಡುಗೆಯೂ ಇದೆ. ಇದಕ್ಕೆ ಕಾರಣರಾಗಿರುವ ಸಚಿವರು, ಅಧ್ಯಕ್ಷರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ಸಲ್ಲುತ್ತವೆ’ ಎಂದಿದ್ದಾರೆ.

ಕಾರ್ಖಾನೆಯಲ್ಲಿ ಮತ್ತಷ್ಟು ಉತ್ಪಾದನೆ ಹೆಚ್ಚಿಸಲು ಮತ್ತು ಮಾರುಕಟ್ಟೆ ವಿಸ್ತರಿಸಲು ಸಚಿವರು ಹಲವು ಹೊಸಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇವುಗಳ ಯಶಸ್ಸಿಗೆ ಉದ್ಯೋಗಿಗಳ ಅಗತ್ಯವಿದೆ. ಆದರೆ ಈಗ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಸಂಸ್ಥೆಯಲ್ಲಿ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಇದರಿಂದ ಕಾರ್ಖಾನೆಯ ಸಾಧನೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಈ ನಿಟ್ಟಿನಲ್ಲಿ ಸಚಿವ ಪಾಟೀಲರ ಸಹಕಾರ ಮತ್ತು ಸಲಹೆಗಳು ಅತ್ಯಗತ್ಯವಾಗಿವೆ ಎಂದು ಅವರು ಕಾರ್ಮಿಕರ ಸಂಘದ ಪರವಾಗಿ ತಿಳಿಸಿದ್ದಾರೆ.

For More Updates Join our WhatsApp Group : 

 https://chat.whatsapp.com/JVoHqE476Wn3pVh1gWNAcH

                                  

Leave a Reply

Your email address will not be published. Required fields are marked *