ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ | Darshan judicial custody Extended

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28 ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಮತ್ತು ತುಮಕೂರು ಜೈಲಿನಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಕೋರ್ಟ್ ಗೆ ಹಾಜರು ಪಡಿಸಲಾಯಿತು. ಈ ಸಮಯದಲ್ಲಿ ಪೊಲೀಸರು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನ ವಿಸ್ತರಿಸಿದರು.

ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಜೂನ್ 9 ರಂದು ಭೀಕರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ದರ್ಶನ್​ ಹಾಗೂ ಅವರ ಗ್ಯಾಂಗ್ ಜೈಲು ಪಾಲಾಗಿದೆ.

Leave a Reply

Your email address will not be published. Required fields are marked *