ಬೆಂಗಳೂರು: ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಯಾರಾದರೂ ಹೇಳುತ್ತಾರಾ? ಯಾರೇ ತಪ್ಪು ಮಾಡಿದರೂ ತಪ್ಪೇ. ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.
ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಸೂರಜ್ ರೇವಣ್ಣ ಬಂಧನಕ್ಕೊಳಗಾಗಿದ್ದು, ಈ ಕುರಿತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆರಂಭದಲ್ಲಿ ಕುಮಾರಸ್ವಾಮಿಯವರು ಸಿಡಿಮಿಡಿಕೊಂಡರು.
ಈ ಪ್ರಶ್ನೆಯನ್ನು ನಂಗ್ಯಾಕೆ ಕೇಳ್ತೀರಿ? ನಂಗೂ ಅದಕ್ಕೂ ಏನು ಸಂಬಂಧ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ನಂಗಿಲ್ಲ ಎಂದು ಕೆಂಡಾಮಂಡಲವಾದರು. ಬಳಿಕ ದಯವಿಟ್ಟು ಇಂತಹ ವಿಷಯಗಳನ್ನ ನನ್ನ ಹತ್ರ ಚರ್ಚೆ ಮಾಡಬಾರದು. ರಾಜ್ಯಕ್ಕೆ ಸಂಬಂಧಪಟ್ಟ ವಿಷ್ಯಗಳಿದ್ರೆ ಚರ್ಚೆ ಮಾಡಿ ಎಂದರು.
ಆ ವಿಷ್ಯಗಳನ್ನು ನನ್ನ ಹತ್ತಿರ ಯಾಕೆ ಚರ್ಚೆ ಮಾಡ್ತೀರಾ. ಅದರ ಅವಶ್ಯಕತೆ ಏನಿದೆ. ಅದಕ್ಕೆ ಕಾನೂನು ಇರುತ್ತದೆ. ಅದನ್ನು ಕಾನೂನು ನೋಡಿಕೊಳ್ಳುತ್ತದೆ. ಅದು ಯಾತಕ್ಕೆ ಬರುತ್ತದೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಆ ತರಹದ ಪ್ರಶ್ನೆಗಳನ್ನ ಕೇಳಬೇಡಿ ಎಂದು ತಿಳಿಸಿದರು.