ಮೀನು ಅಂದುಕೊಂಡು ಹಾವನ್ನೇ ಸುಟ್ಟು ತಿಂದ ಮಕ್ಕಳು | Children Burned Snake

ನೈನಿತಾಲ್​(ಉತ್ತರಾಖಂಡ): ಸತ್ತ ಹಾವನ್ನು ಮೀನು ಎಂದು ಭಾವಿಸಿದ ಇಬ್ಬರು ಮಕ್ಕಳು ಅದನ್ನು ಬೇಯಿಸಿ ತಿಂದಿದ್ದಾರೆ. ಕೊನೆ ಕ್ಷಣದಲ್ಲಿ ಇದನ್ನು ಗಮನಿಸಿದ ಆ ಮಕ್ಕಳ ತಾಯಿ ಗಾಬರಿಗೊಂಡು, ಅವರನ್ನು ಹಾವು ಸಂರಕ್ಷಣೆ ಮಾಡುವವರ ಬಳಿಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್, ಆ ಹಾವು ವಿಷಕಾರಿಯಲ್ಲದ ಕಾರಣ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಚಿತ್ರ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಅಸಲಿಗೆ ನಡೆದಿದ್ದೇನು?: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಸಮೀಪದ ಪುಚ್ಚಡಿ ನಾಯ್ ಗ್ರಾಮದಲ್ಲಿ ಪ್ಲಾಸ್ಟಿಕ್​ ಆಯುವ ಕುಟುಂಬವೊಂದರ 8 ಮತ್ತು 10 ವರ್ಷದ ಇಬ್ಬರು ಮಕ್ಕಳು ಮನೆಯಿಂದ ತುಸು ತೂರದಲ್ಲಿ ಸತ್ತು ಬಿದ್ದಿದ್ದ ಹಾವನ್ನು ಕಂಡಿದ್ದಾರೆ. ಇದನ್ನು ಮೀನು ಎಂದು ಅವರು ಭಾವಿಸಿದ್ದಾರೆ. ಮನೆಗೆ ತಂದು ಅದನ್ನು ಸುಟ್ಟುಕೊಂಡು ತಿನ್ನಲು ಆರಂಭಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮಕ್ಕಳ ತಾಯಿ ಹಾವನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣವೇ ಮಕ್ಕಳಿಂದ ಅದನ್ನು ಕಿತ್ತುಕೊಂಡು ಬಿಸಾಡಿದ್ದಾರೆ.

ಮಕ್ಕಳ ಪ್ರಾಣಕ್ಕೆ ಅಪಾಯ ಶಂಕಿಸಿ ಅವರನ್ನು ಹಾವುಗಳ ಸಂರಕ್ಷಣೆ ಮಾಡುವ ತಾಲಿಬ್ ಹುಸೇನ್ ಎಂಬವರ ಬಳಿಗೆ ಕರೆದೊಯ್ದಿದ್ದಾರೆ. ಹುಸೇನ್​​ ಅವರು ಮಕ್ಕಳಿಬ್ಬರಿಗೆ ಹಾವು ಕಚ್ಚಿದಾಗ ನೀಡುವ ಔಷಧವನ್ನು ತಿನ್ನಿಸಿದ್ದಾರೆ. ಬಳಿಕ ನಡೆದ ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ.

ಮಕ್ಕಳ ಅದೃಷ್ಟ ಚೆನ್ನಾಗಿತ್ತು: ಮಕ್ಕಳು ಹಾವನ್ನು ಸುಟ್ಟುಕೊಂಡು ತಿಂದರೂ ಅದರ ತಲೆಯನ್ನು ತಿಂದಿರಲಿಲ್ಲ. ಹೀಗಾಗಿ ಅದರಲ್ಲಿನ ವಿಷ ಮಕ್ಕಳಿಗೆ ಹತ್ತಿರಲಿಲ್ಲ. ಜೊತೆಗೆ ಹಾವು ಕೂಡ ಅಷ್ಟೇನೂ ವಿಷಕಾರಿ ಅಲ್ಲ ಎಂದು ಹುಸೇನ್​ ಅವರು ತಿಳಿಸಿದ್ದಾರೆ. ಹಾಗೊಂದು ವೇಳೆ ಅವರು ಈ ತಪ್ಪು ಮಾಡಿದ್ದಲ್ಲಿ ದೊಡ್ಡ ಅನಾಹುತ ಜರುಗುವ ಸಂಭವ ಇತ್ತು. ಹಾವು ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಅವರು ಸಲಹೆ ನೀಡಿದ್ದಾರೆ.

ಘಟನೆಯ ಕುರಿತು ವೈದ್ಯಾಧಿಕಾರಿಯೊಬ್ಬರು ಮಾತನಾಡಿದ್ದು, ಇಂತಹ ಸಂದರ್ಭಗಳಲ್ಲಿ ಸಂತ್ರಸ್ತರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಬೇಕು. ಮಂತ್ರ, ನಾಟಿ ಔಷಧದಿಂದ ದೇಹ ಪ್ರವೇಶಿಸಿದ ವಿಷ ಇಳಿಯುವುದಿಲ್ಲ. ಇದು ಪ್ರಾಣಕ್ಕೂ ಅಪಾಯ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಹಾರದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಎರಡು ಮಕ್ಕಳು ಹಾವನ್ನು ಸುಟ್ಟು ತಿಂದಿದ್ದರು. ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದ.

Leave a Reply

Your email address will not be published. Required fields are marked *